ಕೆರೆಬೇಟೆಯ ಕೋ ಡೈರೆಕ್ಟರ್ ಶೇಖರ್ ರೇಷನ್ ಅಂಗ್ಡಿ ಓನರ್!

Public TV
2 Min Read
Shekar karadimane

‘ಗೌರಿಶಂಕರ್’ (Gowri Shankar) ನಾಯಕನಾಗಿ ನಟಿಸಿರುವ ‘ಕೆರೆಬೇಟೆ’ (Kerebete Film) ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗಾಣಲಿದೆ. ಯಾವುದೇ ಹೈಪುಗಳಿಲ್ಲದೆ, ಸಾಂಗು, ಟೀಸರ್‌ಗಳ ಮೂಲಕವೇ ‘ಕೆರೆಬೇಟೆ’ ಹುಟ್ಟು ಹಾಕಿರುವ ನಿರೀಕ್ಷೆ ಸಕಾರಾತ್ಮಕ ಬೆಳವಣಿಗೆಯಂತೆಯೇ ಭಾಸವಾಗುತ್ತದೆ. ಅಪ್ಪಟ ಮಲೆನಾಡಿನ ಕಥೆ, ಅಲ್ಲಿಯದ್ದೇ ಭಾಷಾ ಸೊಗಡಿನೊಂದಿಗೆ, ರಗಡ್ ಶೈಲಿಯಲ್ಲಿ ಮೂಡಿ ಬಂದಿರೋ ಈ ಸಿನಿಮಾ, ಪ್ರತಿಭಾನ್ವಿತ ತಾಂತ್ರಿಕ ವರ್ಗ, ಆಯಾ ಪಾತ್ರಗಳಿಗೆ ಒಪ್ಪುವಂಥಾ ಕಲಾವಿದರ ಬಳಗದೊಂದಿಗೆ ಕಳೆಗಟ್ಟಿಕೊಂಡಿದೆ. ಬೇರೆಲ್ಲ ಅಂಶಗಳದ್ದು ಒಂದು ತೂಕವಾದರೆ, ಇಲ್ಲಿನ ಪಾತ್ರಗಳಿಗೆ ಕಲಾವಿದರ ತಲಾಶು ನಡೆಸಿದ್ದು ಮತ್ತೊಂದು ತೆರನಾದ ಸಾಹಸವಾಗಿ ದಾಖಲಾಗುತ್ತೆ.

Shekar karadimane 4

ನಿರ್ದೇಶಕ ರಾಜಗುರು ಮತ್ತು ನಾಯಕ ನಟ ಗೌರಿಶಂಕರ್ (Gowri Shankar) ಇಲ್ಲಿನ ಪ್ರತೀ ಪಾತ್ರಗಳಿಗೂ ಅಳೇದೂ ತೂಗಿ, ಆ ಪಾತ್ರವೇ ಆಗಿಬಿಡುವಂಥಾ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವರಿಗೆಲ್ಲ ತರಬೇತಿಯನ್ನೂ ಕೊಡಿಸಿ ಸಜ್ಜುಗೊಳಿಸಿದ್ದಾರೆ. ಮಾಲೆನಾಡಿನ ಭಾಷೆಯ ಸೊಗಡು ಗೊತ್ತಿರುವ ಸ್ಥಳೀಯರೇ ಒಂದಷ್ಟು ಮಂದಿಗೂ ಅವಕಾಶ ಮಾಡಿ ಕೊಡಲಾಗಿದೆ. ಇದರ ಭಾಗವಾಗಿಯೇ ಕೆರೆಬೇಟೆಯ ನಿರ್ದೇಶನ ವಿಭಾಗದಲ್ಲಿ ಮನಕಾರ್ಯನಿರ್ವಹಿಸಿದ್ದ ಶೇಖರ್ ಕರಡಿಮನೆ ಕೂಡಾ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಕೆರೆಬೇಟೆಗಿಳಿದ ಗೋಪಾಲ ದೇಶಪಾಂಡೆಗೆ ಮಲೆನಾಡ ಮೋಹ!

Shekar karadimane 3

ಶೇಖರ್ ಕರಡಿಮನೆ (Shekar Karadimane) ತೀರ್ಥಹಳ್ಳಿ ಮೂಲದವರು. ಎರಡು ದಶಕಗಳಷ್ಟು ಕಾಲ ಸಿನಿಮಾ ರಂಗದ ನಿರ್ದೇಶನ ವಿಭಾಗದಲ್ಲಿ ಸಕ್ರಿಯರಾಗಿರುವ ಶೇಖರ್, ಈಗಾಗಲೇ ಹಲವಾರು ಸಿನಿಮಾಗಳ ಭಾಗವಾಗಿದ್ದಾರೆ. ಅದೇ ಅನುಭವದ ಆಧಾರದಲ್ಲಿ ಅವರು ಕೆರೆಬೇಟೆ ಚಿತ್ರದ ಕೋ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ನಡುವೆ ನಾಯಕಿಯ ಮಾವನ ಪಾತ್ರವನ್ನು ಯಾವ ಕಲಾವಿದರು ಮಾಡಬೇಕೆಂಬ ಚರ್ಚೆ ಶುರುವಾದಾಗ, ಆ ಅವಕಾಶ ಶೇಖರ್ ಪಾಲಾಗಿದೆ. ಹಳ್ಳಿಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿರೋ ದಯಾನಂದನ ಪಾತ್ರಕ್ಕೆ ಶೇಖರ್ ಜೀವ ತುಂಬಿದ್ದಾರೆ. ಈಗಾಗಲೇ ಮಹೇಶ್ ಬಾಬುರಂಥಾ ನಿರ್ದೇಶಕರೊಂದಿಗೆ ಕಾರ್ಯನಿರ್ವಹಿಸಿರುವ, ಹಲವಾರು ಹಿಟ್ ಸಿನಿಮಾಗಳ ಭಾಗವಾಗಿರುವ ಶೇಖರ್, ಈ ಮೂಲಕ ನಟನೆಗಿಳಿದಿದ್ದಾರೆ. ಆ ಪಾತ್ರವೂ ಕೂಡಾ ಕೆರೆಬೇಟೆಯ ಒಟ್ಟಾರೆ ಆಕರ್ಷಣೆಗಳಲ್ಲೊಂದು.

Shekar karadimane 1

ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

Share This Article