– ಸೇನೆ ಸಾರಥ್ಯದಲ್ಲಿ ಶೀಘ್ರ ಮಧ್ಯಂತರ ಸರ್ಕಾರ ರಚನೆ
ನವದೆಹಲಿ/ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ (Bangladesh) ರಾಜಕೀಯ ಬಿಕ್ಕಟ್ಟು ತಲೆದೋರಿದೆ. ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ವಿಚಾರವಾಗಿ ವಿದ್ಯಾರ್ಥಿಗಳು ಕಳೆದ ತಿಂಗಳು ಶುರು ಮಾಡಿದ ಹೋರಾಟ, ಅಸಹಕಾರ ಚಳವಳಿ ಪರಿಣಾಮ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ (sheikh hasina) ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶದಿಂದಲೇ ಪಲಾಯನ ಮಾಡಿದ್ದಾರೆ. ವಿದ್ಯಾರ್ಥಿಗಳ ಹೋರಾಟಕ್ಕೆ ಸೇನೆ ಬೆಂಬಲ ನೀಡಿದ್ದರಿಂದ ಬಂಧನ ಭೀತಿಯಲ್ಲಿ ಶೇಖ್ ಹಸೀನಾ ತಮ್ಮ ಸಹೋದರಿ ಜೊತೆ ಹೆಲಿಕಾಪ್ಟರ್ ಹತ್ತಿ ಭಾರತಕ್ಕೆ (India) ಬಂದು ಆಶ್ರಯ ಪಡೆದಿದ್ದಾರೆ.
Advertisement
ಢಾಕಾದಿಂದ ಅಗರ್ತಲಾಗೆ ಬಂದ ಶೇಖ್ ಹಸೀನಾ, ಅಲ್ಲಿಂದ ಸಿ-130 ವಿಮಾನದಲ್ಲಿ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದಾರೆ. ಅಲ್ಲಿಯೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಚರ್ಚೆ ನಡೆಸಿದ್ದಾರೆ. ಚಾಣಕ್ಯಪುರಿಯ ಬಾಂಗ್ಲಾ ಹೈಕಮೀಷನ್ ಕಚೇರಿ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಶೇಖ್ ಹಸೀನಾ ದೆಹಲಿಯಿಂದ ಲಂಡನ್ ಇಲ್ಲವೇ ಹೆಲ್ಸಿಂಕಿಗೆ ಹೋಗಬಹುದು ಅಥವಾ ಭಾರತದಲ್ಲೇ ಆಶ್ರಯ ಪಡೆಯಬಹುದು ಎಂದು ವರದಿಗಳು ತಿಳಿಸಿವೆ.
Advertisement
Advertisement
ಶೇಖ್ ಹಸೀನಾ ಭಾರತಕ್ಕೆ ಬಂದ ಬೆನ್ನಲ್ಲೇ ಬಾಂಗ್ಲಾದೇಶ ಸೇನೆಯ ತೆಕ್ಕೆಗೆ ಜಾರಿದೆ. ದೇಶ ಉದ್ದೇಶಿಸಿ ಮಾತನಾಡಿದ ಸೇನಾ ಮುಖ್ಯಸ್ಥ ವಾಕರ್ ಉಜ್ ಜಮಾನ್ ಶೀಘ್ರದಲ್ಲೇ ಮಧ್ಯಂತರ ಸರ್ಕಾರ ರಚನೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಇದಕ್ಕೆ ಮೊದಲು, ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ಶೇಖ್ ಹಸೀನಾಗೆ ಸೇನೆ 45 ನಿಮಿಷ ಸಮಯ ನಿಗದಿಮಾಡಿತ್ತು. ಹೀಗಾಗಿಯೇ ಶೇಖ್ ಹಸೀನಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಮಿತ್ರರಾಷ್ಟ್ರ ಭಾರತಕ್ಕೆ ಬಂದಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
Advertisement
ಬಾಂಗ್ಲಾ ಕ್ಷಿಪ್ರ ರಾಜಕೀಯ ಬೆಳವಣಿಗೆ ಬೆನ್ನಲ್ಲೇ, ಭಾರತ-ಬಾಂಗ್ಲಾ ಗಡಿಭಾಗದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಬಿಎಸ್‌ಎಫ್ ಭದ್ರತಾ ಪಡೆಗಳನ್ನು ರವಾನಿಸಿ ಭದ್ರತೆ ಹೆಚ್ಚಿಸಲಾಗಿದೆ. ಬಿಎಸ್‌ಎಫ್ ಸಿಬ್ಬಂದಿಯ ರಜೆ ರದ್ದು ಮಾಡಲಾಗಿದೆ. ಬಾಂಗ್ಲಾದಲ್ಲಿನ ಬೆಳವಣಿಗೆಗಳ ಮೇಲೆ ನಿಗಾ ವಹಿಸಿದ್ದು, ಭಾರತ-ಬಾಂಗ್ಲಾ ರೈಲು ಸಂಚಾರ ಸಹ ಸ್ಥಗಿತಗೊಳಿಸಿದೆ. ಅಂದ ಹಾಗೇ, 1975ರಲ್ಲಿ ಶೇಖ್ ಮುಜಿಬುರ್ ರೆಹ್ಮಾನ್ ಹತ್ಯೆಯಾದಾಗ ಶೇಖ್ ಹಸೀನಾಗೆ ಭಾರತ ರಾಜಾಶ್ರಯ ನೀಡಿತ್ತು. 1996-2001, 2009ರಿಂದ ಇಲ್ಲಿಯವರೆಗೆ ಶೇಖ್ ಹಸೀನಾ ಪ್ರಧಾನಿಯಾಗಿದ್ರು.
ಉದ್ರಿಕ್ತ ಪ್ರತಿಭಟನಾಕಾರರಿಂದ ಸಂಭ್ರಮಾಚರಣೆ:
ಬಾಂಗ್ಲಾದೇಶದಿಂದ ಪ್ರಧಾನಿ ಶೇಖ್ ಹಸೀನಾ ʻಮಹಾ ಪಲಾಯನʼ ಬೆನ್ನಲ್ಲೇ ಉದ್ರಿಕ್ತ ಪ್ರತಿಭಟನಾಕಾರರು ಸಂಭ್ರಮಾಚರಣೆಗಳಲ್ಲಿ ಮುಳುಗಿದ್ದಾರೆ. ಶೇಖ್ ಹಸೀನಾ ಕಚೇರಿ, ನಿವಾಸಕ್ಕೆ ನುಗ್ಗಿ ಸಿಕ್ಕಸಿಕ್ಕದ್ದನ್ನು ಧ್ವಂಸ ಮಾಡಿದ್ದಾರೆ. ಪ್ರಧಾನಿಯ ಅಧಿಕೃತ ನಿವಾಸ ಗಣಭಾಬನ್‌ನಲ್ಲಿ ಹಾಸಿಗೆ ಮೇಲೆ ಉರುಳಾಡಿದ್ದಾರೆ. ಮನೆಯಲ್ಲಿ ಟಿವಿ ನೋಡುತ್ತಾ ಖುಷಿಪಟ್ಟಿದ್ದಾರೆ, ಸಿಕ್ಕಿದೆಲ್ಲವನ್ನು ದೋಚಿದ್ದಾರೆ. ಶೇಖ್ ಹಸೀನಾ ಅವರ ದಿವಂಗತ ತಂದೆ, ಬಾಂಗ್ಲಾ ಪಿತಾಮಹ ಶೇಖ್ ಮುಜಿಬುರ್ ರೆಹಮಾನ್ ಪ್ರತಿಮೆಯನ್ನು ಧ್ವಂಸ ಮಾಡಿದ್ದಾರೆ.
ಢಾಕಾದಲ್ಲಿನ ಅವಾಮಿ ಲೀಗ್ ಪಕ್ಷದ ಪ್ರಧಾನ ಕೇಂದ್ರ ಕಚೇರಿಗೂ ಬೆಂಕಿ ಹಚ್ಚಿದ್ರು. ಇದಕ್ಕೆ ಸಂಬಂಧಿಸಿದ ಒಂದೊಂದು ದೃಶ್ಯವೂ ಶ್ರೀಲಂಕಾದ ಹಿಂಸಾಚಾರವನ್ನೇ ನೆನಪಿಸಿದೆ. ಉದ್ರಿಕ್ತರು ಇಂದಿರಾ ಗಾಂಧಿ ಸಾಂಸ್ಕೃತಿ ಕೇಂದ್ರ ಮತ್ತು ನಾಲ್ಕು ಹಿಂದೂ ದೇವಾಲಯಗಳಿಗೆ ಹಾನಿ ಮಾಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ದೇಶದ ಬಹುತೇಕ ಕಡೆ ಘರ್ಷಣೆಗಳು ಶುರುವಾಗಿವೆ. ಸದ್ಯಕ್ಕೆ ಮೊಬೈಲ್ ಇಂಟರ್‌ನೆಟ್ ಬಂದ್ ಮಾಡಿದೆ. ಘರ್ಷಣೆಯಲ್ಲಿ ಈವರೆಗೂ 300ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಾಂಗ್ಲಾದಲ್ಲಿ ಹಿಂಸಾಚಾರಕ್ಕೆ ಕಾರಣ ಏನು?
ಬಾಂಗ್ಲಾದೇಶದಲ್ಲಿ ಪ್ರಸ್ತುತ ಕೋಟಾ ವ್ಯವಸ್ಥೆ ಪ್ರಕಾರ ಸರ್ಕಾರಿ ಉದ್ಯೋಗಗಳಲ್ಲಿ 56% ಕಾಯ್ದಿರಿಸಲಾಗಿದೆ. ಇದರಲ್ಲಿ 1971ರ ವಿಮೋಚನಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಶೇ.30, ಹಿಂದುಳಿದ ಜಿಲ್ಲೆಗಳವರಿಗೆ ಶೇ.10, ಮಹಿಳೆಯರಿಗೆ ಶೇ.10, ಜನಾಂಗೀಯ ಅಲ್ಪಸಂಖ್ಯಾತರಿಗೆ ಶೇ.5 ಹಾಗೂ ಅಂಗವಿಕಲರಿಗೆ ಶೇ.1 ಮೀಸಲಾತಿ ಕಲ್ಪಿಸಲಾಗಿದೆ. ವಿಮೋಚನಾ ಹೋರಾಟದ ಕುಟುಂಬಸ್ಥರಿಗೆ ಕಲ್ಪಿಸಿರುವ ಶೇ.30 ಮೀಸಲಾತಿ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಬೇಡಿಕೆಯನ್ನು ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ತಿರಸ್ಕರಿಸಿದ್ದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ವಿದ್ಯಾರ್ಥಿಗಳ ಪ್ರತಿಭಟನೆಗೆ ಸೇನೆ, ವಿಪಕ್ಷಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದರಿಂದ ಆಕ್ರೋಶ ಕಟ್ಟೆಯೊಡಿದಿದೆ. ಇದರ ಬೆನ್ನಲ್ಲೇ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದಾರೆ.