ಶೀತಲ್ ಶೆಟ್ಟಿ ಮತ್ತೊಂದು ಕನಸಿನ ಬೆನ್ನತ್ತಿದ್ದಾರೆ. ಪತಿಬೇಕು ಡಾಟ್ ಕಾಮ್ ಚಿತ್ರದ ಮೂಲಕ ಹೀರೋಯಿನ್ನಾಗಿಯೂ ಕಾಣಿಸಿಕೊಂಡಿರೋ ಅವರು ಅದರ ಬೆನ್ನಲ್ಲೇ ಕಿರುಚಿತ್ರವೊಂದರ ಮೂಲಕ ಗಮನ ಸೆಳೆದಿದ್ದರು. ಸಂಗಾತಿಯೆಂಬ ಕಿರುಚಿತ್ರದ ಮೂಲಕ ಗಹನವಾದೊಂದು ಸಂಗತಿಯನ್ನು ಹೇಳಿದ್ದ ಶೀತಲ್ ಇದೀಗ ಮತ್ತೊಂದು ಕಿರುಚಿತ್ರ ನಿರ್ದೇಶನ ಮಾಡಲು ತಯಾರಿ ನಡೆಸುತ್ತಿದ್ದಾರೆ!
ಸಂಗಾತಿ ಚಿತ್ರದ ಮೂಲಕವೇ ಸೂಕ್ಷ್ಮವಾಗಿ ಕಥೆ ಹೇಳೋ ಶೀತಲ್ ಶೆಟ್ಟಿ ಇದೀಗ ಬೇರೆಯದ್ದೇ ಬಗೆಯ ಕಥೆಯೊಂದನ್ನು `ಕಾರು’ ಎಂಬ ಕಿರು ಚಿತ್ರದ ಮೂಲಕ ಹೇಳ ಹೊರಟಿದ್ದಾರೆ.
Advertisement
Advertisement
ಯಾವುದೇ ಕೆಲಸವನ್ನಾದರೂ ನೀಟಾಗಿ ಮಾಡಬೇಕೆಂಬ ಮನಸ್ಥಿತಿಯ ಶೀತಲ್ ಸಂಪೂರ್ಣ ತಯಾರಿ ಮಾಡಿಕೊಂಡೇ ಈ ಕಿರು ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಇದರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ವಹಿಸಿಕೊಂಡಿದ್ದಾರೆ. ನಡುವೆ ಅಂತರವಿರಲಿ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಯೋಗೀಶ್ವರ್ ಈ ಚಿತ್ರಕ್ಕೆ ಕ್ಯಾಮೆರಾ ಕಣ್ಣಾಗಲಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೂ ಸಂಕಲನಕಾರರಾಗಿದ್ದ ಪ್ರದೀಪ್ ರಾವ್ ಈ ಚಿತ್ರದ ಸಂಕಲನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಭಿಷೇಕ್ ಪೋಸ್ಟರ್ ಡಿಸೈನ್ ಕಾರ್ಯ ನೋಡಿಕೊಂಡರೆ, ಅನಂತ್ ಕಾಮತ್ ಮ್ಯೂಸಿಕ್ ಈ ಕಿರುಚಿತ್ರಕ್ಕಿರಲಿದೆ.
Advertisement
Advertisement
`ಕಾರು’ ಹನ್ನೆರಡದಿಂದ ಹದಿನೈದು ನಿಮಿಷದ ಕಿರುಚಿತ್ರ. ಒಳ್ಳೆ ಫೀಲ್ ಕೊಡೋದರ ಜೊತೆಗೆ, ಈ ಕಿರುಚಿತ್ರ ನೋಡಿದವರೆಲ್ಲರ ಮುಖದಲ್ಲಿಯೂ ತೃಪ್ತಿಯ ಮಂದಹಾಸ ಮೂಡುವಂತಾಗಬೇಕು ಎಂಬ ಉದ್ದೇಶದಿಂದಲೇ ಶೀತಲ್ ಈ ಚಿತ್ರಕ್ಕೆ ತಯಾರಾಗುತ್ತಿದ್ದಾರೆ. ಪುಟ್ಟ ವಯಸ್ಸಿನಲ್ಲಿ ಪ್ರತಿಯೊಬ್ಬರಿಗೂ ಏನೇನೋ ಕನಸಿರುತ್ತೆ. ಯಾವುದೋ ವಸ್ತು ಕನಸಾಗಿರುತ್ತೆ. ಅದರಲ್ಲಿ ಕೆಲವು ನಿಜವಾಗಿ ಮತ್ತೆ ಕೆಲವು ಸುಳ್ಳಾಗಲೂ ಬಹುದು. ಮತ್ತೆ ಕೆಲ ಕನಸುಗಳು ಭ್ರಮೆಯ ಕೂಸಾಗಿರಲೂಬಹುದು. ಇಂಥಾದ್ದೊಂದು ಹೊಳಹಿನೊಂದಿಗೇ ಸಿದ್ಧಗೊಂಡಿರೋ ಈ ಕಿರುಚಿತ್ರ ಪುಟ್ಟ ಹುಡುಗಿಯೊಬ್ಬಳ ಸುತ್ತ ತಿರುಗೋ ಕಥೆ.
ಹಳ್ಳಿಯೊಂದರಲ್ಲಿ ಘಟಿಸೋ ಈ ಕಥೆಯನ್ನು ಮಧುಗಿರಿಯ ಸುತ್ತಲ ವಾತಾವರಣದಲ್ಲಿ ಚಿತ್ರೀಕರಿಸಲು ಶೀತಲ್ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಈ ಚಿತ್ರಕ್ಕೆ ಬೇಕಾದ ಪುಟಾಣಿಗಾಗಿ ಶೀತಲ್ ಆಡಿಷನ್ ಕರೆದಿದ್ದರು. ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ಸಿಕ್ಕಿದೆ. ಇನ್ನೂರಕ್ಕೂ ಹೆಚ್ಚು ಮಕ್ಕಳು ಸಂಪರ್ಕಿಸಿದ್ದಾರೆ. ಇದರಲ್ಲಿಬ್ಬರನ್ನು ಆರಿಸಿಕೊಂಡಿರೋ ಶೀತಲ್ ಇಷ್ಟರಲ್ಲೇ ಅದರಲ್ಲೊಬ್ಬರನ್ನು ಫೈನಲ್ ಮಾಡಲಿದ್ದಾರಂತೆ.
ಇದೀಗ ಈ ಕಿರುಚಿತ್ರದ ತಯಾರಿ ಚಾಲ್ತಿಯಲ್ಲಿದೆ. ಸಂಗಾತಿ ಚಿತ್ರದಲ್ಲಿ ಗಹನವಾದೊಂದು ವಿಚಾರವನ್ನು ಹೇಳಿದ ಕಲಾತ್ಮಕ ಶೈಲಿಯಿಂದ ಗಮನ ಸೆಳೆದಿದ್ದ ಶೀತಲ್ ಅದರ ಕಾರಣದಿಂದಲೇ ತಾಂತ್ರಿಕವಾಗಿಯೂ ಅನುಭವ ಪಡೆದುಕೊಂಡಿದ್ದಾರೆ. ಆ ಕಿರುಚಿತ್ರದ ಫಲವಾಗಿಯೇ ಕಾರು ಚಿತ್ರಕ್ಕೂ ಹಣ ಹೂಡುವವರೂ ಸಿಕ್ಕಿದ್ದಾರೆ. ಇನ್ನೇನು ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ನಡೆಸಿ, ಡಿಸೆಂಬರಿನಲ್ಲಿ ನಡೆಯಲಿರೋ ಗೋವಾ ಶಾರ್ಟ್ ಫಿಲಂ ಫೆಸ್ಟಿವಲ್‍ನಲ್ಲಿ ಈ ಕಿರುಚಿತ್ರವನ್ನು ಪ್ರದರ್ಶನ ಮಾಡಲು ಶೀತಲ್ ಯೋಜನೆ ಹಾಕಿಕೊಂಡಿದ್ದಾರೆ.
ಈ ಮೂಲಕ ಶೀತಲ್ ಶೆಟ್ಟಿ ನಿರ್ದೇಶಕಿಯಾಗಿ ನೆಲೆಗೊಳ್ಳುವ ಸೂಚನೆ ನೀಡಿದ್ದಾರೆ. ಕಾರು ಚಿತ್ರ ಪೂರ್ಣಗೊಂಡು ಬಿಡುಗಡೆಯಾದ ನಂತರ ಶೀತಲ್ ಮುಂದಿನ ನಡೆ ನಿಖರವಾಗಿ ಜಾಹೀರಾಗಬಹುದೇನೋ..?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv