ನವದೆಹಲಿ: ಭಯಾನಕ ಹಿಟ್ ಆಂಡ್ ರನ್ ಪ್ರಕರಣಕ್ಕೆ(Hit and Run Case) ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು ಮೃತಪಟ್ಟ ಅಂಜಲಿ(Anjali) ಮದ್ಯಪಾನ ಮಾಡಿ ಸ್ಕೂಟಿ ಚಲಾಯಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಹೋಟೆಲ್ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಅಂಜಲಿ ಜೊತೆ ಇದ್ದ ಸ್ನೇಹಿತೆ ನಿಧಿಯನ್ನು(Nidhi) ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ಘಟನೆ ಹೇಗಾಯ್ತು ಎಂಬುದನ್ನು ವಿವರಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ನಿಧಿ, ಅಂಜಲಿ ಕುಡಿದು ಸ್ಕೂಟಿ ಓಡಿಸಲು ಹಠ ಮಾಡಿದ್ದಳು. ಈ ಸಂದರ್ಭದಲ್ಲಿ ಆಕೆಗೆ ಮತ್ತು ನನಗೆ ಜಗಳ ನಡೆದಿತ್ತು. ನನಗೆ ಪ್ರಜ್ಞೆ ಇದೆ ನಾನು ಚಲಾಯಿಸುತ್ತೇನೆ ಎಂದು ಹೇಳಿದರೂ ಆಕೆ ಹಠ ಹಿಡಿದು ಸ್ಕೂಟಿ ಓಡಿಸಿದ್ದಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ಯುವತಿ ಹತ್ಯೆ ಕೇಸ್ – ಬಂಧಿತ ಐವರಲ್ಲಿ ಓರ್ವ ಬಿಜೆಪಿ ಸದಸ್ಯ: ಎಎಪಿ ಆರೋಪ
ಕಾರು ನಮಗೆ ಡಿಕ್ಕಿ ಹೊಡೆದ ನಂತರ ನಾನು ಒಂದು ಬದಿಗೆ ಬಿದ್ದೆ. ಸ್ನೇಹಿತೆ ಕಾರಿನ ಕೆಳಗಡೆ ಸಿಕ್ಕಿಕೊಂಡಿದ್ದಳು. ಕಾರಿನಲ್ಲಿದ್ದ ಪುರುಷರಿಗೆ ಮಹಿಳೆ ಕಾರಿನ ಕೆಳಗೆ ಸಿಲುಕಿಕೊಂಡಿದ್ದ ವಿಚಾರ ತಿಳಿದಿತ್ತು. ಅಪಘಾತದ ನಂತರ ನಾನು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಭಯಗೊಂಡು ಮನೆಗೆ ಹೋಗಿದ್ದೆ ಎಂದು ವಿವರಿಸಿದ್ದಾರೆ.
ಹೋಟೆಲ್ ಮ್ಯಾನೇಜರ್ ಪ್ರತಿಕ್ರಿಯಿಸಿ ಜ.1 ನಸುಕಿನ ಜಾವ 1:30ಕ್ಕೆ ಇಬ್ಬರು ಜಗಳವಾಡುತ್ತಿದ್ದರು. ನಾನು ಇಲ್ಲಿ ಜಗಳವಾಡಬೇಡಿ ಎಂದು ಹೇಳಿದರೂ ಅವರು ಮತ್ತೆ ಜಗಳ ಮುಂದುವರಿಸಿ ಸ್ಕೂಟಿ ಹತ್ತಿ ತೆರಳಿದ್ದರು ಎಂದು ತಿಳಿಸಿದ್ದಾರೆ.
ಹೋಟೆಲ್‌ನಲ್ಲಿ ಪ್ರತ್ಯೇಕವಾಗಿ ರೂಮ್ ಬುಕ್ ಮಾಡಿದ್ದ ಹುಡುಗರ ಜೊತೆ ಇಬ್ಬರು ಮಾತನಾಡುತ್ತಿದ್ದರು ಎಂದು ಹೋಟೆಲ್ ಮ್ಯಾನೇಜರ್ ತಿಳಿಸಿದ ಹಿನ್ನೆಲೆಯಲ್ಲಿ ಈಗ ಪೊಲೀಸರು ಕೆಲ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಂಜಲಿ ಮತ್ತು ನಿಧಿ ಜನವರಿ 1 ರಂದು ಹೋಟೆಲ್‌ನಿಂದ ಹೊರಟಿದ್ದಾರೆ. ದಾರಿಯಲ್ಲಿ ಬರುತ್ತಿದ್ದಾಗ ಅವರ ಸ್ಕೂಟಿಗೆ ಕಾರಿಗೆ ಡಿಕ್ಕಿ ಹೊಡೆದಿದೆ. ನಿಧಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಅಂಜಲಿಯ ಕಾಲು ಮುಂಭಾಗದ ಆಕ್ಸಲ್‌ಗೆ ಸಿಲುಕಿಕೊಂಡಿದ್ದರಿಂದ ಕಾರು ದೇಹವನ್ನು ಸುಮಾರು 13 ಕಿ.ಮೀ ದೂರ ರಸ್ತೆಯಲ್ಲಿ ಎಳೆದುಕೊಂಡು ಹೋಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ವಿರುದ್ಧ ನರಹತ್ಯೆ ಅಡಿ ಪ್ರಕರಣ ದಾಖಲಾಗಿದೆ.