ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿ ಕನ್ನಡಿಗರ. ಮನಗೆದ್ದಿರುವ ನಿರ್ದೇಶಕ ಶಶಾಂಕ್ (Shashank) ಹಾಗೂ ತಮ್ಮ ಅಭಿನಯದ ಮೂಲಕ ಜನಪ್ರಿಯರಾಗಿರುವ ಡಾರ್ಲಿಂಗ್ ಕೃಷ್ಣ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರಕ್ಕೆ “ಕೌಸಲ್ಯಾ ಸುಪ್ರಜಾ ರಾಮ” (Kausalya Supraja Rama) ಎಂಬ ಸುಂದರ ಶೀರ್ಷಿಕೆ ಇಡಲಾಗಿದೆ. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ನಡೆಯಿತು. ಒಂದು ವಿಭಿನ್ನ ವಿಡಿಯೋ ಮೂಲಕ ಶಶಾಂಕ್ ತಮ್ಮ ಚಿತ್ರದ ಟೈಟಲ್ ಬಿಡುಗಡೆ ಮಾಡಿರುವುದು ವಿಶೇಷ.
ಕೌಸಲ್ಯಾ ಸುಪ್ರಜಾ ರಾಮ” ನಾವು ದಿನ ಬೆಳಗ್ಗೆ ಕೇಳುವ ಸುಮಧುರ ಸುಪ್ರಭಾತದ ಮೊದಲ ಸಾಲು. ಹೆಸರೆ ಹೇಳುವಂತೆ ಇದೊಂದು ತಾಯಿ ಮಗನ ಭಾವನಾತ್ಮಕ ಸನ್ನಿವೇಶಗಳನ್ನೊಳಗೊಂಡಿರುವ ಚಿತ್ರ. ಹಾಗಂತ ನಮ್ಮ ಚಿತ್ರದಲ್ಲಿ ಮನೋರಂಜನೆಗೆ ಕೊರತೆಯಿಲ್ಲ. ಉತ್ತಮ ಮನೋರಂಜನೆ ಹಾಗೂ ಸೆಂಟಿಮೆಂಟ್ ಎರಡು ಇರುವ, ಕುಟುಂಬ ಸಮೇತ ನೋಡಬಹುದಾದ ಸುಂದರ ಕೌಟುಂಬಿಕ ಚಿತ್ರ. ಈ ಚಿತ್ರದ ನಾಯಕರಾಗಿ ಡಾರ್ಲಿಂಗ್ ಕೃಷ್ಣ (Darling Krishna)ನಟಿಸುತ್ತಿದ್ದು, ಅವರ ತಾಯಿ – ತಂದೆ ಪಾತ್ರದಲ್ಲಿ ಸುಧಾ ಬೆಳವಾಡಿ, ರಂಗಾಯಣ ರಘು ಅಭಿನಯಿಸುತ್ತಿದ್ದಾರೆ. ಅಚ್ಯತಕುಮಾರ್, ಗಿರಿರಾಜ್ ಸಹ ತಾರಾಬಳಗದಲ್ಲಿದ್ದಾರೆ. ಇಬ್ಬರು ನಾಯಕಿಯರಿರುತ್ತಾರೆ. ಅದರಲ್ಲಿ ಒಬ್ಬರು ಹೊಸಬರು.
“ಈಗಾಗಲೇ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಐದು ಹಾಡುಗಳಿದೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಸುಜ್ಞಾನ್ ಈ ಚಿತ್ರದ ಛಾಯಾಗ್ರಾಹಕರು. ನಮ್ಮ ಶಶಾಂಕ್ ಸಿನಿಮಾಸ್ ಹಾಗೂ ಬಿ.ಸಿ.ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹೌಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ನಾನು ಬಿ.ಸಿ.ಪಾಟೀಲ್ ಅಭಿನಯದ “ಕೌರವ” ಚಿತ್ರದಲ್ಲಿ ಎಸ್ ಮಹೇಂದರ್ ಅವರ ಬಳಿ ಕೆಲಸ ಮಾಡಿದ್ದೆ. ಆಗಿನಿಂದಲೂ ಬಿ.ಸಿ.ಪಾಟೀಲ್ ಅವರು ಪರಿಚಯ. ಈಗ ಅವರ ಜೊತೆ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ಶಶಾಂಕ್. ಇದನ್ನೂ ಓದಿ:ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ
ಸದಭಿರುಚಿ ಚಿತ್ರಗಳ ನಿರ್ದೇಶಕ ಶಶಾಂಕ್ ಅವರ ನಿರ್ದೇಶನದಲ್ಲಿ ನಟಿಸಬೇಕೆಂಬ ಆಸೆ ಈಗ ಈಡೇರಿದೆ. “ಕೌಸಲ್ಯಾ ಸುಪ್ರಜಾ ರಾಮ” ಸುಂದರ ಶೀರ್ಷಿಕೆ. “ಲವ್ ಮಾಕ್ಟೇಲ್”, ” ಲಕ್ಕಿ ಮ್ಯಾನ್” ಸೇರಿದಂತೆ ನನ್ನ ಅನೇಕ ಚಿತ್ರಗಳ ಶೀರ್ಷಿಕೆ ಇಂಗ್ಲಿಷ್ ನಲ್ಲಿದೆ. ಈಗ ಇಂಗ್ಲಿಷ್ ಇಲ್ಲದ ಶೀರ್ಷಿಕೆ ಸಿಕ್ಕಿದೆ. ಕಥೆ ಹಾಗೂ ನನ್ನ ಪಾತ್ರ ತುಂಬಾ ಚೆನ್ನಾಗಿದೆ ಎಂದರು ನಾಯಕ ಡಾರ್ಲಿಂಗ್ ಕೃಷ್ಣ.ನಾನು ಶಶಾಂಕ್ ಅವರನ್ನು ಬಹಳ ದಿನಗಳಿಂದ ನಿಮ್ಮ ಚಿತ್ರದಲ್ಲಿ ನಟಿಸಬೇಕೆಂಬೆದು ಕೇಳುತ್ತಿದೆ. ಈಗ ಅವಕಾಶ ಕೊಟ್ಟಿದ್ದಾರೆ ಎಂದರು ನಿರ್ದೇಶಕ ಹಾಗೂ ನಟ ಗಿರಿರಾಜ್ (Giriraj).
ಸಹ ನಿರ್ಮಾಪಕ ಹನುಮಂತ ರಾವ್, ಛಾಯಾಗ್ರಾಹಕ ಸುಜ್ಞಾನ್, ಶಶಾಂಕ್ ಅವರೊಂದಿಗೆ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಯದುನಂದನ್ ಹಾಗೂ ಟೈಟಲ್ ಅನಿಮೇಷನ್ ಮಾಡಿರುವ ಸಂತೋಷ್ ರಾಧಾಕೃಷ್ಣನ್ ಈ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಗಿರಿ ಮಹೇಶ್ ಈ ಚಿತ್ರದ ಸಂಕಲನಕಾರರು.