– ಗ್ಯಾರಂಟಿ ನಿಲ್ಲಿಸ್ತೇವೆ ಎಂದಿದ್ದಕ್ಕೆ ಕಾಂಗ್ರೆಸ್‍ಗೆ ಮತ!
ಬೀದರ್: ಯತ್ನಾಳ್ ಅವರೇ ನಿಮ್ಮ ನಡೆ ಜನರ ದಾರಿ ತಪ್ಪಿಸುತ್ತಿದೆ. ಈ ರೀತಿಯ ಸಂಶಯದಿಂದಾಗಿ ಉಪಚುನಾವಣೆಯಲ್ಲಿ ನಮಗೆ ಸೋಲಾಗಿದೆ ಎಂದು ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal ) ವಿರುದ್ಧ ಶಾಸಕ ಶರಣು ಸಲಗರ್ (Sharanu Salagar) ಕಿಡಿಕಾರಿದ್ದಾರೆ.
ಬಸವ ಕಲ್ಯಾಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ್ಯ ಬಿವೈ ವಿಜಯೇಂದ್ರ ಟೀಂಗೆ ಅಪ್ಪ ಅಮ್ಮ ಇಲ್ಲಾ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ವಕ್ಫ್ ವಿರುದ್ಧದ ಹೋರಾಟ ಮಾಡುತ್ತಿರುವ ಯತ್ನಾಳ್ ಟೀಂ ಅನಾಥವಾಗಿದೆ. ಮಾಜಿ ಎಂಎಲ್ಸಿಗಳು, ಮಾಜಿ ಎಂಪಿಗಳು ಹಾಗೂ ಮನೆಯಲ್ಲಿ ಕುಳಿತುಕೊಂಡವರನ್ನು ಟೀಂಗೆ ಸೇರಿಸಿಕೊಂಡಿದ್ದೀರಿ. ಈ ಟೀಂಗೆ ತಂದೆ, ತಾಯಿ ಇದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಟೀಂಗೆ ಒರಿಜಿನಲ್ ತಂದೆ ತಾಯಿ ಇದ್ದಾರೆ. ನಾವು ಮಾಡಿದ ಹೋರಾಟವನ್ನು ಅವರು ಮಾಡುತ್ತಿದ್ದಾರೆ. ಆ ಹೋರಾಟಕ್ಕೆ ನಾನು ಹೋಗಬೇಕಾ? ಬೇಡವೇ? ಎಂದು ನಮ್ಮ ಪಕ್ಷದ ಅಧ್ಯಕ್ಷರು ನಿರ್ಧರಿಸಬೇಕು ಎಂದು ವಿಜಯೇಂದ್ರ (B,Y Vijayendra) ಪರ ಬ್ಯಾಟ್ ಬೀಸಿದ್ದಾರೆ.
ಇನ್ನೂ, ವಾಲ್ಮೀಕಿ ಹಗರಣ, ಮುಡಾ ಹಗರಣ ಆಗಿದ್ದೇ ಉಪ ಚುನಾವಣೆಯಲ್ಲಿ ಹಣ ಹಂಚಲು. ಹಗರಣದ ನೂರಾರು ಕೋಟಿ ರೂ. ಹಣವನ್ನು ಹೊಳೆಯಂತೆ ಹರಿಸಿದ್ದಾರೆ. ಇದರಿಂದ ಕಾಂಗ್ರೆಸ್ ಮೂರು ಕಡೆ ಗೆದ್ದಿದೆ. ಜನರ ತೀರ್ಪಿಗೆ ನಾನು ತಲೆ ಬಾಗುತ್ತೇನೆ. ಇದು ನಮ್ಮ ನಿಜವಾದ ಸೋಲಲ್ಲ ಹಗರಣಗಳು ಮಾಡಿ ಜನರಿಗೆ ಆಮಿಷ ತೋರಿಸಿದ್ದರಿಂದ ಸೋಲಾಗಿದೆ. ಮತ ಹಾಕದೇ ಇದ್ರೆ ಗ್ಯಾರಂಟಿ ಬಂದ್ ಮಾಡುತ್ತೇವೆ ಎಂದು ಹೇಳಿದ ಪರಿಣಾಮ ಜನ ಮತ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ಮೂರು ಕ್ಷೇತ್ರದ ಮತದಾರರಿಗೆ ನಾವು ಕಾಂಗ್ರೆಸ್ ಸರ್ಕಾರ ಮಾಡಿದ್ದ ಭ್ರಷ್ಟಾಚಾರದ ಬಗ್ಗೆ ತಿಳಿಸಲು ವಿಫಲರಾಗಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.