ಬೆಂಗಳೂರು: ಶರಣ್ ಮತ್ತು ರಾಗಿಣಿ ಜೊತೆಯಾಗಿ ನಟಿಸಿರೋ ಮೊದಲ ಚಿತ್ರ ಅಧ್ಯಕ್ಷ ಇನ್ ಅಮೆರಿಕಾ. ಯೋಗಾನಂದ್ ಮುದ್ದಾನ್ ನಿರ್ದೇಶನದ ಈ ಸಿನಿಮಾ ಶರಣ್ ವೃತ್ತಿ ಬದುಕಿಗೆ ಮತ್ತೊಂದು ದೊಡ್ಡ ಗೆಲುವನ್ನು ಜಮೆಯಾಗಿಸುತ್ತದೆಂಬ ಗಾಢ ನಂಬಿಕೆಯ ಒಡ್ಡೋಲಗದಲ್ಲಿಯೇ ತೆರೆ ಕಂಡಿದೆ. ಶರಣ್ ಸಿನಿಮಾಗಳೆಂದರೆ ಕ್ಷಣ ಕ್ಷಣವೂ ನಗುವಂಥಾ ಸದಾವಕಾಶ ಗ್ಯಾರೆಂಟಿ ಎಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಅದನ್ನು ಸುಳ್ಳು ಮಾಡದೆ ನಿರೀಕ್ಷೆಯ ಮಟ್ಟವನ್ನೂ ಮೀರಿ ನಗೆಯ ನಶೆಯೇರಿಸುವಂತೆ ಮೂಡಿ ಬಂದಿರೋ ಈ ಸಿನಿಮಾವೀಗ ಬಿಡುಗಡೆಗೊಂಡಿದೆ.
ಆತ ಎದುರಿಯೆ ಎಂಥಾ ಪ್ರಳಯಾಂತಕರೇ ಇದ್ದರೂ ಯಾಮಾರಿಸಿ ಬಿಡುವಂಥಾ ಚಾಲಾಕಿ ಆಸಾಮಿ. ಶರಣ್ ಅವರ ಚುರುಕುತನ ಮತ್ತು ನಟನೆಯ ಕಸುವಿಗೆ ಹೇಳಿ ಮಾಡಿಸಿದಂಥಾ ಪಾತ್ರವದು. ಹೀಗೆ ಚಾಲಾಕಿ ವ್ಯಕ್ತಿತ್ವದ ಆತನಿಗೊಂದು ಲವ್ವು. ಒಟ್ಟಿಗೆ ಬದುಕಲು ತುದಿಗಾಲಲ್ಲಿ ನಿಂತವಳನ್ನು ಕೊಡವಿಕೊಳ್ಳುವ ಈತ ಅಮೆರಿಕ ಹುಡುಗಿಯ ಮೋಹಕ್ಕೆ ಬೀಳುತ್ತಾನೆ. ಪ್ರೀತಿಯೊಂದಿಗೆ ಸಕಲ ಲೆಕ್ಕಾಚಾರಗಳೂ ಬೆರೆತು ಅಮಿರಿಕದವಳ ಮುಂದೆ ಮಂಡಿಯೂರಿ ಬಿಡೋ ಅಧ್ಯಕ್ಷ ಆಕೆಯನ್ನೇ ಮದುವೆಯಾಗಿ ಬಿಡುತ್ತಾನೆ. ಆ ನಂತರವೇ ಪ್ರತಿ ಕ್ಷಣವೂ ನಿತ್ತರಿಸಿಕೊಳ್ಳಲಾಗದಂತೆ ನಗಿಸುತ್ತಾ, ಅದರ ನಡುವೆಯೇ ಬದುಕಿನ ಸೂಕ್ಷ್ಮಗಳನ್ನು ತೆರೆದಿಡುತ್ತಾ ಈ ಪಾತ್ರದ ಚುರುಕುತನದೊಂದಿಗೆ ಸ್ಪರ್ಧೆಗೆ ಬಿದ್ದಂಥಾ ಆವೇಗದೊಂದಿಗೆ ಕಥೆ ಮುಂದುವರೆಯುತ್ತೆ.
https://www.facebook.com/publictv/videos/vb.339166656101093/2431344540440013/?type=2&theater
ಶರಣ್ ಅವರ ಈವರೆಗಿನ ಚಿತ್ರಗಳಲ್ಲಿ ಮದುವೆಯ ಮೂಲಕವೇ ಕ್ಲೈಮ್ಯಾಕ್ಸು ಸಂಪನ್ನಗೊಳ್ಳುತ್ತಿತ್ತು. ಆದರೆ ಅಧ್ಯಕ್ಷ ಇನ್ ಅಮೆರಿಕಾ ಮಾತ್ರ ಅದಕ್ಕಿಂತ ಸಂಪೂರ್ಣ ಭಿನ್ನ. ಯಾಕೆಂದರೆ ಇಲ್ಲಿ ಮಜವಾದ ಕಥೆ ಮದುವೆಯ ನಂತರವೇ ತೆರೆದುಕೊಳ್ಳುತ್ತೆ. ಯಾವುದೋ ಮೋಹಕ್ಕೆ ಬಿದ್ದು ಅಮೆರಿಕಾ ಹುಡುಗಿಯನ್ನು ಮದುವೆಯಾಗಿ ಅಮೆರಿಕಾ ಪಾಲಾಗೋ ಅಧ್ಯಕ್ಷನ ಪಡಿಪಾಟಲುಗಳನ್ನಿಲ್ಲಿ ಮಜವಾಗಿ ಕಟ್ಟಿ ಕೊಡಲಾಗಿದೆ. ಹಾಗೆ ಅಧ್ಯಕ್ಷನಿಗೆ ಸಿಕ್ಕ ಅಮೆರಿಕಾ ಹುಡುಗಿ ಪಕ್ಕಾ ಕುಡುಕಿ. ಗಂಡೈಕಳ ಕುಡಿತದ ಚಟವನ್ನೇ ಮಡಿವಂತಿಕೆಯಿಂದ ನೋಡೋ ವಾತಾವರಣದಿಂದ ಹೋದ ಅಧ್ಯಕ್ಷ ಮಡದಿಯೇ ಕುಡುಕಿಯೆಂದು ಗೊತ್ತಾದಾಕ್ಷಣ ಅನುಭವಿಸೋ ಶಾಕು, ನಂತರ ಆಕೆಯೊಂದಿಗಿನ ಸಂಸಾರದ ಪಯಣಗಳೆಲ್ಲವನ್ನು ಒಂದೆರಕ್ಷಣವೂ ನಗುವಿಗೆ ಬ್ರೇಕು ನೀಡದಂತೆ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ.
ವಿದೇಶಗಳಲ್ಲಿ ಹೋಗಿ ನಿಂತಾಗಲೇ ನಮ್ಮ ಆಚಾರ ವಿಚಾರಗಳ ಕಿಮ್ಮತ್ತಿನ ಅರಿವಾಗುತ್ತೆ ಅಂತೊಂದು ಮಾತಿದೆ. ಅದು ಈ ಸಿನಿಮಾದ ಕಥೆಯಲ್ಲಿಯೂ ಋಜುವಾತಾಗಿದೆ. ಅಲ್ಲಿನ ಅರಾಜಕ ಜೀವನ ಪದ್ಧತಿ, ಕುಸಿದ ಸಂಬಂಧಗಳ ಮೌಲ್ಯವನ್ನು ಕೂಡಾ ಪ್ರತಿಯೊಬ್ಬರನ್ನೂ ಆಲೋಚನೆಗೆ ಹಚ್ಚುವಂತೆ ಈ ಸಿನಿಮಾವನ್ನು ರೂಪಿಸಲಾಗಿದೆ. ಅಧ್ಯಕ್ಷನ ಮಡದಿ ಕುಡಿತದ ಚಟಕ್ಕೆ ಬೀಳಲು ಕಾರಣವೇನೆಂಬುದೂ ಸೇರಿದಂತೆ ಅನೇಕಾನೇಕ ಕುತೂಹಲಕರ ಅಂಶಗಳು ಈ ಸಿನಿಮಾದಲ್ಲಿದೆ. ಬಿಗು ನಿರೂಪಣೆಯ, ಭರಪೂರ ಮನೋರಂಜನೆಯ ಈ ಸಿನಿಮಾ ಭರ್ಜರಿ ಖುಷಿ ನೀಡೋದಂತೂ ಖಂಡಿತಾ.
https://www.facebook.com/publictv/videos/vb.339166656101093/533582377401952/?type=2&theater
ನಿರ್ದೇಶಕ ಯೋಗಾನಂದ್ ಮುದ್ದಾನ್ ಅವರಿಗಿದು ಮೊದಲ ಚಿತ್ರ. ಆದರೆ ಅದರ ಸಣ್ಣ ಕುರುಹೂ ಕಾಣದಂತೆ ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ. ಅಧ್ಯಕ್ಷನಾಗಿ ಶರಣ್ ಅವರ ನಟನೆಯ ಬಗ್ಗೆ ಎರಡು ಮಾತಾಡುವಂತಿಲ್ಲ. ರಾಗಿಣಿಯಂತೂ ಈವರೆಗೆ ಎಂದೂ ಮಾಡಿರದಿದ್ದ ಪಾತ್ರಕ್ಕೆ ಬೆರಗು ಮೂಡುವಂತೆ ಜೀವ ತುಂಬಿದ್ದಾರೆ. ಎಲ್ಲ ಪಾತ್ರಗಳನ್ನೂ ಕೂಡಾ ನಿರ್ದೇಶಕರು ಅಚ್ಚುಕಟ್ಟಾಗಿಯೇ ರೂಪಿಸಿದ್ದಾರೆ. ಕಲಾವಿದರೂ ಕೂಡಾ ಬೇರೆಯದ್ದೇ ಛಾಯೆಯಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಾರೆ. ಒಟ್ಟಾರೆಯಾಗಿ, ಭರಪೂರ ಮನೋರಂಜನೆಯೊಂದಿಗೆ ಎಲ್ಲರಿಗೂ ಇಷ್ಟವಾಗುವಂತೆ ಅಧ್ಯಕ್ಷ ಇನ್ ಅಮೆರಿಕಾ ಚಿತ್ರ ಮೂಡಿ ಬಂದಿದೆ.
ರೇಟಿಂಗ್: 3.5 / 5