ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ನಡೆದಿದ್ದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ.
ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದರು, ಅಲ್ಲದೆ ಒಂಭತ್ತು ತಿಂಗಳ ಮಗು ಸಹ ಸಾವನ್ನಪ್ಪಿತ್ತು. ಒಟ್ಟು ಐವರು ಸಾವನ್ನಪ್ಪಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶನಿವಾರ ಎಲ್ಲ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಇಂದು ಮನೆಯಲ್ಲಿ ಮಹಜರು ಮತ್ತು ಪಂಚನಾಮೆ ಮಾಡಲಿದ್ದು, ಸಾವಿನ ಸಂಬಂಧ ಸ್ಫೋಟಕ ಮಾಹಿತಿ ಹೊರಬಿಳುವ ಸಾಧ್ಯತೆ ಇದೆ.
ಮನೆ ಮಾಲೀಕ ಶಂಕರ್ ಕೂಡ ಮನೆಯಲ್ಲಿ ಸಾಕಷ್ಟು ಚಿನ್ನಾಭರಣ, ನಗದು, ಆಸ್ತಿ ಪತ್ರಗಳು ಇವೆ. ಆತ್ಮಹತ್ಯೆ ಗೂ ಮುನ್ನ ಮಗ ಮಧುಸಾಗರ ಡೆತ್ ನೋಟ್ ಬರೆದಿಟ್ಟಿರುತ್ತಾನೆ. ಹೀಗಾಗಿ ಹಿರಿಯ ಅಧಿಕಾರಿಗಳು ನನ್ನ ಸಮ್ಮುಖದಲ್ಲೇ ಮಹಜರು ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಸಾವಿನ ಸಂಬಂಧ ಒಂದೊಂದೇ ಮಾಹಿತಿಗಳು ಸಿಗುತ್ತಿವೆ. ಇದನ್ನೂ ಓದಿ: ಕೌಟುಂಬಿಕ ಕಲಹದಿಂದ್ಲೇ ಸಾಮೂಹಿಕ ಆತ್ಮಹತ್ಯೆ – ದುರಂತಕ್ಕೆ ಪತ್ನಿಯೇ ಕಾರಣವೆಂದ ಪತಿ ಶಂಕರ್
ಮೃತ ಸಿಂಧುರಾಣಿಯ 9 ತಿಂಗಳ ಮಗು ಕೂಡ ಸಾವನ್ನಪ್ಪಿದ್ದು, ಮಗು ಮುಖದ ಮೇಲಿನ ಮೂಳೆಗಳು ಮುರಿದಿವೆ ಅನ್ನೋ ಮಾಹಿತಿ ಸಿಕ್ಕಿದೆ. ಹೀಗಾಗಿ ತಾಯಿಯೇ ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ. ಮನೆಯಲ್ಲಿ ಎಲ್ಲರೂ ಆತ್ಮಹತ್ಯೆಗೆ ಶರಣಾಗಿದ್ದರ ಬಗ್ಗೆ ಪೊಲೀಸರಿಗೆ ಹಲವು ಅನುಮಾಗಳು ಮೂಡಿದ್ದು, ಅದೊಂದು ಆಸ್ತಿ ವಿಚಾರಕ್ಕೆ ಪದೇ ಪದೇ ಜಗಳವಾಗುತ್ತಿತ್ತು. ಇದೇ ವಿಚಾರಕ್ಕೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿರಬಹುದು. ಹೀಗಾಗಿ ಮಗ ಮಧುಸಾಗರ ಬರೆದಿರುವ ಡೆತ್ ನೋಟ್ ಮತ್ತು ಎಲ್ಲರ ಬ್ಯಾಂಕ್ ಡಿಟೇಲ್ಸ್, ಮೊಬೈಲ್ ಗಳ ಡಿಟೇಲ್ಸ್ ಸಿಡಿಆರ್ ಕಲೆಹಾಕಲಾಗುತ್ತಿದೆ. ಇಂದು ನಡೆಯುವ ಮಹಜರು ನಂತರ ಮತ್ತಷ್ಟು ಮಾಹಿತಿಗಳು ಸಿಗುವ ಸಾಧ್ಯತೆ ಇದೆ.