ಬೆಂಗಳೂರು: ನವಗ್ರಹಗಳಲ್ಲಿ ಒಂದಾಗಿರುವ ಶನಿಗ್ರಹವು ಮಕರ ರಾಶಿಯು ಶನಿಯ ಆಡಳಿತಕ್ಕೊಳಪಟ್ಟ ರಾಶಿಯಾಗಿದ್ದು, ಈ ರಾಶಿಯ ಅಧಿಪತಿ ಶನಿ. ಜಗತ್ತಿಗೆ ಕರ್ಮಕಾರಕನೂ, ನ್ಯಾಯದ ಬಗ್ಗೆ ಬೋಧಿಸುವವನೂ ಆದ ಶನಿಯು 30 ವರ್ಷಗಳ ನಂತರ ತನ್ನದೇ ಮನೆಯಾದ ಮಕರ ರಾಶಿಗೆ ಸಂಚರಿಸುವುದು ಅತ್ಯಂತ ಪ್ರಮುಖವಾದ ಸಂಗತಿಯೆಂದು ಪರಿಗಣಿಸಲಾಗುತ್ತದೆ.
ಕರ್ಮ, ನ್ಯಾಯ ಹಾಗೂ ಏಳು ಪರಿಶ್ರಮಗಳ ಬಗ್ಗೆ ಬೋಧಿಸುವ ಶನಿಯು ಪ್ರತಿಯೊಂದು ರಾಶಿಯ ಮೇಲೂ ಪರಿಣಾಮಗಳನ್ನು ಬೀರಲಿದ್ದಾನೆ.
ವೈದಿಕ, ಪೌರಾಣಿಕ, ಆಧ್ಯಾತ್ಮಿಕ ದೃಷ್ಟಿಕೋನ ಏನು?
ತಂದೆ ಸೂರ್ಯ, ಮಗ ಶನಿಯ ಸಮಾಗಮ ಆಗಲಿದ್ದು ಜ.15 ರಂದು ಮಕರ ರಾಶಿಗೆ ಸೂರ್ಯನ ಪ್ರವೇಶವಾಗಿತ್ತು. ಇವತ್ತು ಶನಿ ಕೂಡ ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡಲಿದ್ದಾನೆ. 30 ವರ್ಷಗಳಿಂದ ಈ ರೀತಿಯ ಸಂಯೋಜನೆ ಸಂಭವಿಸಿಲ್ಲ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಘಟನೆ ಮಹತ್ವದ ಸಂಗತಿ ಎಂದು ಪರಿಗಣಿಸಲಾಗುತ್ತದೆ.
ಪೌರಾಣಿಕವಾಗಿ ತಂದೆ ಮಗನಾದರೂ ಸೂರ್ಯ ಮತ್ತು ಶನಿ ಶತ್ರುಗಳು. ಇಬ್ಬರ ನಡವಳಿಕೆಗಳೂ ಭಿನ್ನವಾಗಿದ್ದು, ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಇಬ್ಬರು ಶತ್ರುಗಳೆಂದೇ ಪರಿಗಣನೆ ಮಾಡಲಾಗುತ್ತದೆ. ಇದನ್ನೂ ಓದಿ: 30 ವರ್ಷಗಳ ಬಳಿಕ ಮಕರ ರಾಶಿಗೆ ಶನಿ ಪ್ರವೇಶ – ಯಾವ ರಾಶಿಗೆ ಅದೃಷ್ಟ, ಯಾವ ರಾಶಿಗೆ ಕಾಟ..?
ಆಧ್ಯಾತ್ಮಿಕ ದೃಷ್ಟಿಯಲ್ಲಿ ಸೂರ್ಯ-ಶನಿ ಸಮ್ಮಿಲನ ವಿಶಿಷ್ಟ ಸಂಯೋಜನೆ ಎಂದು ಭಾವಿಸಲಾಗುತ್ತದೆ. ಶನಿ ರಾತ್ರಿಯನ್ನು ಪ್ರತಿನಿಧಿಸಿದರೆ, ಸೂರ್ಯ ಹಗಲನ್ನು ಪ್ರತಿನಿಧಿಸುತ್ತಾನೆ. ಶನಿಯು ಕರ್ಮ, ನ್ಯಾಯದ ಅಧಿಪತಿ ಆಗಿದ್ದಾನೆ. ಸೂರ್ಯನು ಆರೋಗ್ಯ ದೇವರು ಮತ್ತು ಆತ್ಮಕ್ಕೆ ಉಪಕಾರಿ.