ಬೆಂಗಳೂರು: ಶಕ್ತಿ ಯೋಜನೆ (Shakthi Scheme) ಜಾರಿಯಾಗಿ ಇಂದಿಗೆ 22 ದಿನ. ಇಲ್ಲಿಯವರೆಗೂ ಉಚಿತವಾಗಿ 10 ಕೋಟಿಗೂ ಅಧಿಕ ಮಹಿಳೆಯರು ಉಚಿತ ಓಡಾಟ ಮಾಡಿದ್ದಾರೆ. ಈ ನಡುವೆ ಮಹಿಳೆಯರಿಗೆ ಉಚಿತ ನೀಡಿದ ಕಾರಣ ಪುರಷ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು ಅನ್ನೋ ಮಾತುಗಳಿದ್ದವು. ಆದರೆ ದೈನಂದಿನ ಓಡಾಟ ಮಾಡುತ್ತಿದ್ದ ಪುರುಷರ ಸಂಖ್ಯೆಗಿಂತಲೂ ಹೆಚ್ಚು ಪುರುಷರು ಪ್ರಯಾಣ ಮಾಡ್ತಿದ್ದಾರೆ. ಇಷ್ಟೇ ಅಲ್ಲದೆ ಸಾರಿಗೆ ಬಸ್ ನಲ್ಲಿ ಪುರುಷರ ಓಡಾಟದಿಂದ ಬರ್ತಿರುವ ಆದಾಯವೂ ಡಬಲ್ ಆಗಿರೋದು ಮತ್ತೊಂದು ವಿಶೇಷ.
ಶಕ್ತಿಯೋಜನೆ ಜಾರಿಗೂ ಮುನ್ನ ನಿತ್ಯ 42 ಲಕ್ಷ ಪುರುಷರು ಸಾರಿಗೆ ಬಸ್‍ನಲ್ಲಿ (Male Passengers In Govt Bus) ಸಂಚರಿಸುತ್ತಿದ್ದರು. ಆದರೆ ಶಕ್ತಿ ಯೋಜನೆ ಜಾರಿ ಬಳಿಕ ನಿತ್ಯ ಸರಾಸರಿ 55 ಲಕ್ಷ ಪುರುಷರ ಓಡಾಟ ಜಾಸ್ತಿಯಾಗಿದೆ. ಅಂದರೆ ದಿನಕ್ಕೆ ಸರಾಸರಿ 13 ಲಕ್ಷ ಹೆಚ್ಚಳವಾಗಿದ್ದು, ಗಮನಾರ್ಹ ಬೆಳವಣಿಕೆ. ಇದಕ್ಕೆ ಕಾರಣ ಕುಟುಂಬದವರು ಒಟ್ಟಾಗಿ ಪ್ರಯಾಣ ಮಾಡುವಾಗ ಮಹಿಳೆಯರಿಗೆ ಹೇಗೂ ಉಚಿತ ಅಂತ ಸಾರಿಗೆ ಬಸ್‍ನಲ್ಲಿ ಹೋಗ್ತಿದ್ದಾರೆ. ರಶ್ ಆದ್ರೂ ಏನು ಮಾಡೋಕೆ ಆಗದೇ ಅಡ್ಜೆಸ್ಟ್ ಮಾಡಿಕೊಂಡು ಅದೇ ಬಸ್ ನಲ್ಲಿ ಓಡಾಟ ಮಾಡ್ತಿದ್ದಾರೆ. ಇನ್ನೂ ಕೆಲವರು ಕಷ್ಟವಾದ್ರು ಸಾಮಾನ್ಯವಾಗಿ ದಿನನಿತ್ಯದಂತೆ ಸರ್ಕಾರಿ ಬಸ್‍ಗಳನ್ನೆ ಬಳಕೆ ಮಾಡುವವರು ಅದನ್ನೆ ಮುಂದುವರಿಸಿದ್ದಾರೆ. ಈ ಎಲ್ಲಾ ಕಾರಣಕ್ಕೆ ಸದ್ಯ ಪುರುಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ.
ಪುರುಷ ಪ್ರಯಾಣಿಕರ ಓಡಾಟ ಸಂಖ್ಯೆ ಹೆಚ್ಚಾದಂತೆ ಆದಾಯ ಕೂಡ ಹೆಚ್ಚಾಗಿದೆ. ಸಾರಿಗೆ ಸಂಸ್ಥೆಗೆ ಕಳೆದ 19 ದಿನದಲ್ಲಿ ಪುರುಷರ ಪ್ರಯಾಣದಿಂದ 302 ಕೋಟಿ ಆದಾಯ ಹರಿದು ಬಂದಿದೆ. ಶಕ್ತಿ ಯೋಜನೆ ಜಾರಿಗೂ ಮುನ್ನ ನಿತ್ಯ 24.48 ಕೋಟಿ ಆದಾಯ ಬರುತ್ತಿತ್ತು. ಆಗ ಪುರುಷರ ಓಡಾಟದಿಂದ ಸಾರಿಗೆ ಸಂಸ್ಥೆಗೆ 12 ಕೋಟಿ ಆದಾಯ ಬರುತ್ತಿತ್ತು. ಈಗ 16.87 ಕೋಟಿ ಗೆ ಗಂಡಸರ ಸಂಚಾರದ ಆದಾಯ ಹೆಚ್ಚಾಗಿದೆ. ಒಟ್ಟಾರೆ ಒತ್ತಡ, ರಶ್, ಗಲಾಟೆ ಗದ್ದಲ ನಡುವೆಯೂ ಹೆಚ್ಚಿನ ಪುರುಷರು ಸಾರಿಗೆ ಬಸ್ ನಲ್ಲಿ ಓಡಾಡಿ, ನಿಗಮಗಳಿಗೆ ಇನ್ನಷ್ಟು ಲಾಭ ಹೆಚ್ಚಿಸಿರೋದು ನಿಜಕ್ಕೂ ವಿಶೇಷವೇ ಸರಿ.
Web Stories