– ನಮ್ಮ ತಪ್ಪಿದ್ದರೆ ಗಲ್ಲಿಗೇರಿಸಿ ಎಂದ ಮಾಜಿ ಸಚಿವ
ಬೆಂಗಳೂರು: ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ ಬಗ್ಗೆ ಚರ್ಚೆ ಮಾಡುವ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಹೆಚ್.ಡಿ.ರೇವಣ್ಣ ಮೇಲಿನ ದೂರು ಪ್ರಕರಣ ಪ್ರಸ್ತಾಪ ಮಾಡಿದರು. ಈ ವೇಳೆ ಸದನದಲ್ಲಿ ಹಾಜರಿದ್ದ ರೇವಣ್ಣ ಭಾವೋದ್ವೇಗಕ್ಕೊಳಗಾದ ಪ್ರಸಂಗ ನಡೆಯಿತು.
ಆರ್.ಅಶೋಕ್ ಅವರು ಮಾತಾಡುವಾಗ, ಹಾಸನ ಪ್ರಕರಣಗಳಲ್ಲಿ ಎಸ್ಐಟಿಯವರ ನಡೆ ರೇವಣ್ಣ, ಭವಾನಿ ಹಾಗೂ ಪ್ರೀತಂ ಗೌಡ ವಿಚಾರದಲ್ಲಿ ಸರಿಯಿರಲಿಲ್ಲ. ರೇವಣ್ಣಗೆ ಬೇಲ್ ಪಡೆಯಲು ಅವಕಾಶ ಕೊಡದೇ ಅರೆಸ್ಟ್ ಮಾಡಿದ್ರು. ಎಸ್ಐಟಿ ಭಯದಿಂದ ಇನ್ನಿಬ್ಬರು ಬೇಲ್ ತಗೋಬೇಕಾಯ್ತು. ಆದರೆ ನಾಗೇಂದ್ರರನ್ನು ಎಸ್ಐಟಿಯವರು ಬಂಧಿಸಲಿಲ್ಲ. ವಾಲ್ಮೀಕಿ ಪ್ರಕರಣದಲ್ಲಿ ಎಸ್ಐಟಿ ವಿಫಲ ಆಗಿದೆ. ನಾಗೇಂದ್ರ ಎಸ್ಐಟಿ ವಿಚಾರಣೆ ಎದುರಿಸಿ ನಗ್ತಾ ಬಂದ್ರು. ಎಸ್ಐಟಿಯಲ್ಲಿ ನಾಗೇಂದ್ರಗೆ ಒಂದು ಕಾನೂನು, ರೇವಣ್ಣಗೆ ಒಂದು ಕಾನೂನಾ ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಹೆಚ್.ಡಿ.ರೇವಣ್ಣ ಮಧ್ಯಪ್ರವೇಶ ಮಾಡಿ, ನನ್ನ ಹೆಸರು ಹೇಳಿದ್ದಾರೆ. ನನಗೆ ಮಾತಾಡಲು ಅವಕಾಶ ಬೇಕು. ನಾವು ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿ, ಬೇಡ ಅನ್ನಲ್ಲ. ನಲವತ್ತು ವರ್ಷ ರಾಜಕೀಯ ಜೀವನದಲ್ಲಿದ್ದೀನಿ. ಯಾರೋ ಹೆಣ್ಮಗಳನ್ನ ಕರೆತಂದು ಡಿಜಿ ಕಚೇರಿಯಲ್ಲಿ ದೂರು ಕೊಡಿಸ್ತಾರೆ. ಡಿಜಿ ಆದವನು ದೂರು ಬರೆದುಕೊಳ್ತಾನೆ ಅಂದ್ರೆ ಆತ ಡಿಜಿ ಆಗಲು ಅನ್‌ಫಿಟ್ ಎಂದು ಸದನದಲ್ಲಿ ಡಿಜಿ ವಿರುದ್ಧ ಭಾವಾವೇಶದಿಂದ ರೇವಣ್ಣ ಕಿಡಿಕಾರಿದರು.
ಈ ವೇಳೆ ರೇವಣ್ಣ ಅವರ ಮಾತಿಗೆ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದರು. ಆಗ ಡಿಕೆಶಿ ಎದ್ದು ನಿಂತು, ರೇವಣ್ಣಗೆ ಅನ್ಯಾಯ ಆಗಿದ್ರೆ ಚರ್ಚೆ ಮಾಡೋಣ ಪಾಪ. ರೇವಣ್ಣ ಚರ್ಚೆಗೆ ನೋಟಿಸ್ ಕೊಡಲಿ. ಅನ್ಯಾಯ ಆಗಿದ್ರೆ ಚರ್ಚೆ ಮಾಡೋಣ ಎಂದರು. ಇದಕ್ಕೆ, ಆಯ್ತು.. ಅವಕಾಶ ಕೊಡೋಣ ಎಂದು ಸ್ಪೀಕರ್ ದನಿಗೂಡಿಸಿದರು.