– G7 Summit – 16 ತಿಂಗಳ ಬಳಿಕ ಮೋದಿ- ಟ್ರಂಪ್ ಮುಖಾಮುಖಿ
ಪ್ಯಾರಿಸ್: ಫ್ರಾನ್ಸ್‌ನ ಏವಿಯನ್-ಲೆ-ಬೈನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭೇಟಿಯಾಗಿ, ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ಸುಮಾರು 16 ತಿಂಗಳ ಬಳಿಕ ಉಭಯ ನಾಯಕರು ನೇರ ಮುಖಾಮುಖಿಯಾಗಿ ಮಾತುಕತೆ ನಡೆಸಿದರು.
ಬಳಿಕ ಶೃಂಗದಲ್ಲಿ (G7 Summit) ʻಹೊಸ ಪಾಲುದಾರಿಕೆ ರೂಪಿಸುವುದು ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟಿನ ಪುನರ್ನಿರ್ಮಾಣʼ ಕುರಿತಾಗಿ ಅಧಿವೇಶನ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಈ ವೇಳೆ ಅಮೆರಿಕದ ಮಿಲಿಟರಿ ದಾಳಿಯಲ್ಲಿ ಇತ್ತೀಚೆಗೆ ಸಾವನ್ನಪ್ಪಿದ ಭಾರತೀಯ ನಾವಿಕರ ವಿಷಯ ಪ್ರಸ್ತಾಪಿಸಿದರು. ಟ್ರಂಪ್ ಸಮ್ಮುಖದಲ್ಲೇ ಭಾರತೀಯ ನಾವಿಕರ ಸುರಕ್ಷತೆ (Indian sailors’ safety) ಬಗ್ಗೆ ದನಿ ಎತ್ತಿದರು.
The interactions with world leaders continue at the G7 Summit in Evian.@G7 pic.twitter.com/ZOrAaffrcX
— Narendra Modi (@narendramodi) June 16, 2026
ಅಮೆರಿಕ-ಇರಾನ್ ಸಂಘರ್ಷವು ಆ ಪ್ರದೇಶದಲ್ಲಿರುವ ದೇಶಗಳ ಮೇಲೆ ಗಮನಾರ್ಹ ಮಾನವ ಮತ್ತು ಆರ್ಥಿಕ ನಷ್ಟವನ್ನ ಉಂಡುಮಾಡಿದೆ ಎಂದು ಹೇಳಿದರು.
ಸದ್ಯ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಒಪ್ಪಂದದಲ್ಲಿ ಪ್ರಗತಿಯನ್ನ ನಾವು ಸ್ವಾಗತಿಸುತ್ತೇವೆ. ಆದ್ರೆ ಕಳೆದ ಕೆಲ ದಿನಗಳಲ್ಲಿ ನಮ್ಮ ಮಿತ್ರ ರಾಷ್ಟ್ರಗಳಲ್ಲಿ ಜೀವ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ಈ ಸಂಘರ್ಷ ಕಾರಣವಾಗಿದೆ. ಹಾರ್ಮಜ್ ಜಲಸಂಧಿಯ ನಿರ್ಬಂಧದಿಂದ ಸಮುದ್ರ ವ್ಯಾಪಾರಕ್ಕೆ ಉಂಟಾದ ಅಡ್ಡಿಯು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಹಲವಾರು ಭಾರತೀಯರೂ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಮನ ಸೆಳೆದರು.
ಸುರಕ್ಷಿತ ಸಮುದ್ರ ಮಾರ್ಗಗಳಿಗೆ ಕರೆ
ಇನ್ನೂ ಪಶ್ಚಿಮ ಏಷ್ಯಾ ಸಂಘರ್ಷದ ವ್ಯಾಪಕ ಪರಿಣಾಮ ಎತ್ತಿ ತೋರಿಸಿದ ಪ್ರಧಾನಿ, ಸಮುದ್ರ ವ್ಯಾಪಾರದಲ್ಲಿನ ಅಡಚಣೆಗಳು ಮತ್ತು ಪ್ರಮುಖ ಹಡಗು ಕಾರಿಡಾರ್‌ಗಳಲ್ಲಿ ಕಾರ್ಯನಿರ್ವಹಿಸುವ ನಾವಿಕರು ಎದುರಿಸುತ್ತಿರುವ ಅಪಾಯಗಳ ಬಗ್ಗೆ ಗಮನ ಸೆಳೆದರು.
ಜಾಗತಿಕ ಸಮುದ್ರ ವ್ಯಾಪಾರದ ಮೂಲಕ ರಾಷ್ಟ್ರಗಳನ್ನು ಸಂಪರ್ಕಿಸುವ ನಾವಿಕರ ಸುರಕ್ಷತೆ ಖಚಿತಪಡಿಸಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಸಮುದ್ರ ಮಾರ್ಗಗಳು ಸುರಕ್ಷಿತವಾಗಿರುವುದನ್ನ ಮತ್ತು ನಾವಿಕರು ಭಯವಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಬಹುದು ಎಂಬುದನ್ನ ನಾವು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ಅಂತಾರಾಷ್ಟ್ರೀಯ ಸಹಕಾರ ಬಲಪಡಿಸಲು ಭಾರತ ಎಲ್ಲಾ ದೇಶಗಳೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಪ್ರಧಾನಿ ಹೇಳಿದರು.
ಅಮೆರಿಕ ಅಧ್ಯಕ್ಷರೊಂದಿಗಿನ ದ್ವಿಪಕ್ಷೀಯ ಮಾತುಕತೆಗೆ ಒಂದು ದಿನ ಮೊದಲು ಪ್ರಧಾನಿ ಮೋದಿ ಈ ವಿಷಯ ಪ್ರಸ್ತಾಪಿಸಿದರು.
