ಲಕ್ನೋ: ಅಯೋಧ್ಯೆಯ ಹಲವು ಮಸೀದಿಗಳ ಮೇಲೆ ಆಕ್ಷೇಪಾರ್ಹ ವಸ್ತುಗಳನ್ನು ಎಸೆಯುವುದರ ಜೊತೆಗೆ ಪೋಸ್ಟರ್‌ಗಳನ್ನು ಅಂಟಿಸಿ ಶಾಂತಿ ಮತ್ತು ಸಾಮರಸ್ಯ ಕದಡಿರುವ ಆರೋಪದಡಿ ಏಳು ಜನರನ್ನು ಅಯೋಧ್ಯೆ ಪೊಲೀಸರು ಬಂಧಿಸಿದ್ದಾರೆ.
ಅಯೋಧ್ಯೆ ನಿವಾಸಿಗಳಾಗಿರುವ ಬಂಧಿತ ಆರೋಪಿಗಳನ್ನು ಮಹೇಶ್ ಕುಮಾರ್ ಮಿಶ್ರಾ, ಪ್ರತ್ಯೂಷ್ ಶ್ರೀವಾಸ್ತವ, ನಿತಿನ್ ಕುಮಾರ್, ದೀಪಕ್ ಕುಮಾರ್ ಗೌರ್ ಅಲಿಯಾಸ್ ಗುಂಜನ್, ಬ್ರಿಜೇಶ್ ಪಾಂಡೆ, ಶತ್ರುಘ್ನ ಪ್ರಜಾಪತಿ ಮತ್ತು ವಿಮಲ್ ಪಾಂಡೆ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಠಾಣೆಯಲ್ಲೇ ಮಹಿಳೆಯರಿಂದ ಮಸಾಜ್ ಮಾಡಿಸಿಕೊಂಡ ಪೊಲೀಸ್ ಅಧಿಕಾರಿ ಸಸ್ಪೆಂಡ್
ಕೃತ್ಯದಲ್ಲಿ 11 ಮಂದಿ ಭಾಗಿಯಾಗಿದ್ದು, ಏಳು ಮಂದಿಯನ್ನು ಬಂಧಿಸಲಾಗಿದೆ. ಉಳಿದ ನಾಲ್ವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಗೆ ಬಲೆ ಬೀಸಿದ್ದು, ಕೂಡಲೇ ಅವರನ್ನೂ ಬಂಧಿಸಲಾಗುವುದು. ಬಂಧಿತರಲ್ಲಿ ಮೂವರು ಅಪರಾಧದ ಹಿನ್ನೆಲೆ ಹೊಂದಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಮಹೇಶ್ ನೇತೃತ್ವದಲ್ಲಿ ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಬಂದ ಎಂಟು ಮಂದಿ, ಮಸೀದಿಗಳ ಹೊರಗೆ ಆಕ್ಷೇಪಾರ್ಹ ಪೋಸ್ಟರ್‌ಗಳು ಮತ್ತು ವಸ್ತುಗಳನ್ನು ಎಸೆದಿದ್ದಾರೆ. ಪೊಲೀಸರು ವಸ್ತುಗಳು ಹಾಗೂ ಆರೋಪಿಗಳ ಮೊಬೈಲ್, ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ದರೋಡೆಕೋರರ ಕಾಯಿದೆ ಮತ್ತು ಎನ್‌ಎಸ್‌ಎ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕೆ ಮೋದಿ ಭೇಟಿ ಬಗ್ಗೆ ಮಾತನಾಡುವ ಹಕ್ಕು ಪಾಕಿಸ್ತಾನಕ್ಕಿಲ್ಲ: ಭಾರತ ತಿರುಗೇಟು
ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಪ್ರತೀಕಾರವಾಗಿ ಮಹೇಶ್ ಕುಮಾರ್ ಮಿಶ್ರಾ ತನ್ನ ಸಹಚರರೊಂದಿಗೆ ಸಂಚು ರೂಪಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಅವರು ಅಯೋಧ್ಯೆಯ ಮಸೀದಿ ಕಾಶ್ಮೀರಿ ಮೊಹಲ್ಲಾ, ತತ್ಶಾ ಮಸೀದಿ, ಘೋಸಿಯಾನ ರಾಮನಗರ ಮಸೀದಿ, ಈದ್ಗಾ ಸಿವಿಲ್ ಲೈನ್ ಮಸೀದಿ ಮತ್ತು ದರ್ಗಾ ಜೈಲಿನ ಹಿಂಭಾಗದಲ್ಲಿರುವ ಗುಲಾಬ್ ಶಾ ದರ್ಗಾದ ಮೇಲೆ ಆಕ್ಷೇಪಾರ್ಹ ಪೋಸ್ಟರ್‌ಗಳು ಮತ್ತು ವಸ್ತುಗಳನ್ನು ಎಸೆದಿದ್ದರು.
ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 295 (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳಗಳನ್ನು ಅಪವಿತ್ರಗೊಳಿಸುವುದು), 295-ಎ (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.