ಲಕ್ನೋ: ಕಳ್ಳಭಟ್ಟಿ ಸೇವಿಸಿ 7 ಮಂದಿ ಸಾವನ್ನಪ್ಪಿದ್ದು, 30 ಮಂದಿ ಅಸ್ವಸ್ಥರಾಗಿರುವ ಘಟನೆ ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಘಟನೆಯ ಬಳಿಕ ಮದ್ಯದಂಗಡಿ ಮಾಲೀಕ ನಾಪತ್ತೆಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಗಳವಾರ ತಡರಾತ್ರಿ ಕಾರ್ಯಕ್ರಮವೊಂದರಲ್ಲಿ ಜನರು ಕಳ್ಳಭಟ್ಟಿ ಸೇವಿಸಿದ್ದು, 12 ಮಂದಿಯ ಸ್ಥಿತಿ ಅದೇ ಸಂದರ್ಭ ಹದಗೆಟ್ಟಿತ್ತು. ಸಾವನ್ನಪ್ಪಿದ 7 ಮಂದಿ ಹೊರತುಪಡಿಸಿ 6 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ
ಕಳ್ಳಭಟ್ಟಿ ಸೇವಿಸಿ ಜನರು ಸಾವನ್ನಪ್ಪುತ್ತಿದ್ದಂತೆ ಮದ್ಯದಂಗಡಿ ಮಾಲೀಕ ನಾಪತ್ತೆಯಾಗಿದ್ದಾನೆ. ಕಳ್ಳಭಟ್ಟಿ ಮಾರಾಟ ಮಾಡುತ್ತಿದ್ದ ಅಂಗಡಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಬಳಿಕ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಗನ್ ತರಿಸಿಕೊಳ್ಳುವುದು ಪಿಜ್ಜಾ ಆರ್ಡರ್ ಮಾಡಿದಷ್ಟೇ ಸುಲಭ!
ಕಳ್ಳಭಟ್ಟಿ ಸರಬರಾಜು ಮಾಡುವವರ ಪತ್ತೆಗೆ ತನಿಖೆ ನಡೆಯುತ್ತಿದೆ. ಪೂರೈಕೆದಾರರು 2 ನಿರ್ದಿಷ್ಟ ಬ್ರ್ಯಾಂಡ್ ಮದ್ಯವನ್ನು ಮಾರಾಟ ಮಾಡಿದ್ದು, ಅದರಲ್ಲಿ ಒಂದು ಬ್ರ್ಯಾಂಡ್ ಸಾವುಗಳಿಗೆ ಕಾರಣವಾಗುತ್ತಿದೆ. ಮೃತರ ಕುಟುಂಬ ಸದಸ್ಯರ ಹೇಳಿಕೆಯನ್ನು ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಲಾಗಿದೆ ಎಂದು ರಾಯ್ಬರೇಲಿ ಎಸ್‍ಪಿ ಶ್ಲೋಕ್ ಕುಮಾರ್ ತಿಳಿಸಿದ್ದಾರೆ.