ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಮತ್ತೆ ಜೈಲುಪಾಲಾಗಿರುವ ಎ1 ಆರೋಪಿ ಪವಿತ್ರಾ ಗೌಡ (Pavitra Gowda) ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.
ಪವಿತ್ರಾ ಗೌಡ ಪರ ವಕೀಲರು ತಾಂತ್ರಿಕ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಕುರಿತು ಆ.30ರಂದು ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿತ್ತು. ಈ ವೇಳೆ ಪವಿತ್ರಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿ, ಪವಿತ್ರಗೌಡ ವಿರುದ್ಧ ಆರೋಪಪಟ್ಟಿಯನ್ನು ಬಿಎನ್‌ಎಸ್ (BNS) ಬದಲು ಸಿಆರ್‌ಪಿಸಿ (CRPC) ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿರುವುದರಿಂದ ಕಡ್ಡಾಯ ಜಾಮೀನಿಗೆ ನಮ್ಮ ಕಕ್ಷಿದಾರರು ಅರ್ಹರು, ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಕೋರಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಾಲಯ ಸೆ.2ಕ್ಕೆ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.ಇದನ್ನೂ ಓದಿ: ಗಂಗೆ, ತುಂಗೆಯ ಜೊತೆ ಧರ್ಮಸ್ಥಳ ಯಾತ್ರೆ ಹೊರಟ ಈಶ್ವರಪ್ಪ
ಇನ್ನೂ ನಟ ದರ್ಶನ್ ಬಳ್ಳಾರಿ ಜೈಲಿಗೆ, ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ, ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಮಾಡುವಂತೆ ಹಾಗೂ ಪವಿತ್ರಾ ಗೌಡ ಮತ್ತು ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಉಳಿಯುವಂತೆ ಸಲ್ಲಿಸಿರುವ ಅರ್ಜಿ ಹಾಗೂ ನಟ ದರ್ಶನ್‌ಗೆ ದಿಂಬು, ಬೆಡ್‌ಶೀಟ್ ಕೋರಿರುವ ಅರ್ಜಿಯ ಆದೇಶ ಇಂದು (ಸೆ.2) ಹೊರಬೀಳಲಿದೆ.
ಆ.14ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ (Karnataka Highcourt) ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿತ್ತು.ಇದನ್ನೂ ಓದಿ: ಭೋವಿ ನಿಗಮದ ಅಕ್ರಮ; ಕಾಂಗ್ರೆಸ್ ಸರ್ಕಾರದ 60% ಕಮಿಷನ್‌ಗೆ ಸಾಕ್ಷಿ – ಜೆಡಿಎಸ್ ಕಿಡಿ
 

 
		 
		 
		 
		 
		
 
		 
		 
		 
		