ಬೆಂಗಳೂರು: ತಂದೆಗಿಂತ ಮಗ ಹೆಚ್ಚು ದೈವ ಭಕ್ತ ಎಂದು ರೇವಣ್ಣ ಪುತ್ರ ಸೂರಜ್ ರೇವಣ್ಣರನ್ನು ಸಚಿವ ಆರ್. ಅಶೋಕ್ ಕಾಲೆಳೆದ ಘಟನೆ ವಿಧಾನ ಪರಿಷತ್‍ನಲ್ಲಿ ಇಂದು ನಡೆಯಿತು. ಹಾಸನ ದೇವಾಲಯದ ಬಗ್ಗೆ ಪ್ರಶ್ನೆ ಕೇಳಿದ ಸೂರಜ್ ರೇವಣ್ಣರಿಗೆ ಸಚಿವರು ಕಾಲೆಳೆದು ಉತ್ತರ ಕೊಟ್ಟರು.
900 ವರ್ಷ ಇತಿಹಾಸವಿರುವ ಹೊಳೆನರಸೀಪುರದ ಲಕ್ಷ್ಮೀನರಸಿಂಹ ದೇವಾಲಯದ ಜೀರ್ಣೋದ್ಧಾರದ ಕುರಿತು ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಸೂರಜ್ ರೇವಣ್ಣ ಕಾಲೆಳೆಯುತ್ತಲೆ ಉತ್ತರ ನೀಡಿದರು. ರೇವಣ್ಣನವರಿಗೆ ಭಕ್ತಿ ಜಾಸ್ತಿ ಎಂದು ಗೊತ್ತಿತ್ತು. ಆದರೆ ಅವರ ಪುತ್ರ ಸೂರಜ್ ಕೂಡ ಮೊದಲ ಪ್ರಶ್ನೆಯನ್ನು ನನಗೆ ದೇವರ ಬಗ್ಗೆಯೇ ಕೇಳಿದ್ದಾರೆ. ಹಾಗಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ಲಕ್ಷ್ಮೀನರಸಿಂಹ ದೇವಾಲಯದ ಜೀರ್ಣೋದ್ಧಾರದ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಜಿಲ್ಲಾಧಿಕಾರಿ ವರದಿ ಬೇಕಿದೆ. ಈ ಬಗ್ಗೆ ಡಿಸಿಗೆ ಸೂಚನೆ ಕೊಡುತ್ತೇನೆ. ಡಿಸಿಯಿಂದ ಪ್ರಸ್ತಾವನೆ ಬಂದಲ್ಲಿ ಜೀರ್ಣೋದ್ಧಾರಕ್ಕೆ ಕ್ರಮ ವಹಿಸಲಾಗುತ್ತದೆ. ಜಿಲ್ಲಾಧಿಕಾರಿ ಪ್ರಸ್ತಾವನೆ, ಪುರಾತತ್ವ ಇಲಾಖೆ ಒಪ್ಪಿಗೆ ಬೇಕಿದ್ದು, ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ದೈವ ಸಂಕಲ್ಪ ಯೋಜನೆ ಬಿ.ಸಿ ವರ್ಗಗಳ ದೇವಾಲಯಗಳಿಗೂ ವಿಸ್ತರಣೆ: ಆರ್.ಅಶೋಕ್
ಈ ವೇಳೆ ಇದಕ್ಕೆಲ್ಲಾ ಎಷ್ಟು ಸಮಯ ಬೇಕಾಗಲಿದೆ ಎನ್ನುವ ಸೂರಜ್ ಪ್ರಶ್ನೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ರೇವಣ್ಣಗೆ ಗೊತ್ತು ಕೇಳಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ರೇವಣ್ಣರ ಕೇಳಿ ಸಮಯ ನೋಡಿ ಜೀರ್ಣೋದ್ಧಾರ ಕಾರ್ಯ ಆರಂಭಿಸಿ ಎಂದು ಮತ್ತೆ ಹಾಸ್ಯ ಮಾಡಿದರು.
ಇದಕ್ಕೆ ಹಾಸ್ಯವಾಗಿಯೇ ಉತ್ತರಿಸಿದ ಸಚಿವ ಅಶೋಕ್, ರೇವಣ್ಣ ಸದನಕ್ಕೆ ಬಂದರು ಅಂದರೆ ರಾಹುಕಾಲ ಎಲ್ಲಾ ಮುಗಿದಿದೆ ಎಂದೇ ಅರ್ಥ. ಸಮಯ ನೋಡಿಯೇ ಅವರು ಸದನಕ್ಕೆ ಬರುತ್ತಾರೆ. ಒಮ್ಮೊಮ್ಮೆ ಪಾದರಕ್ಷೆ ಹಾಕಿಕೊಂಡು ಬರುತ್ತಾರೆ. ಮತ್ತೆ ಕೆಲವೊಮ್ಮೆ ಬರಿಗಾಲಿನಲ್ಲೇ ಬರುತ್ತಾರೆ. ಅವರ ಪುತ್ರ ಸೂರಜ್ ಕೂಡ ಪ್ರಶ್ನೋತ್ತರ ಕಲಾಪದ ಆರಂಭದಲ್ಲಿ ಬಾರದೆ, ಅವರ ಪ್ರಶ್ನೆ ಬರುವ ವೇಳೆ ಬಂದಿದ್ದಾರೆ ಎಂದು ಕಾಲೆಳೆದರು. ಇದನ್ನೂ ಓದಿ: ಉಡ್ತಾ ಪಂಜಾಬ್ ಅಲ್ಲ, ಪ್ರಗತಿಪರ ಪಂಜಾಬ್: ಭಗವಂತ್ ಮಾನ್