ಚಂಡೀಗಢ: ದೇಶದ 15ನೇ ರಾಷ್ಟ್ರಪತಿ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವಂತೆ ಅಕಾಲಿ ದಳ ಪಕ್ಷ ತನ್ನ ಸದಸ್ಯರಿಗೆ ಸೂಚಿಸಿತ್ತು. ಆದರೆ ಪಕ್ಷದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಶಾಸಕರೊಬ್ಬರು ರಾಷ್ಟ್ರಪತಿ ಚುನಾವಣೆಯನ್ನೇ ಬಹಿಷ್ಕರಿಸಿದ್ದಾರೆ.
ಅಕಾಲಿ ದಳ ಪಕ್ಷದ ಶಾಸಕ ಮನ್‌ಪ್ರೀತ್ ಸಿಂಗ್ ಆಯಲಿ ಚುನಾವಣೆ ಬಹಿಷ್ಕರಿಸಿದ್ದು, ನಾನು ದ್ರೌಪದಿ ಮುರ್ಮು ಹಾಗೂ ಯಶವಂತ್ ಸಿನ್ಹಾ ಇಬ್ಬರಿಗೂ ವೋಟು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ- ಮತ ಚಲಾಯಿಸಿದ ಪ್ರಧಾನಿ ಮೋದಿ
ಈ ಕುರಿತು ಫೇಸ್‌ಬುಕ್‌ನಲ್ಲಿ ವೀಡಿಯೋ ಹಂಚಿಕೊಂಡಿರುವ ಶಾಸಕ, 1984ರ ಸಿಖ್ ಹತ್ಯಾಕಾಂಡದ ಹೊಣೆ ಹೊತ್ತಿರುವ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಸಾಧ್ಯವಿಲ್ಲ. ಪಂಜಾಬ್‌ನ ಸಮಸ್ಯೆಗಳನ್ನು ಬಗೆಹರಿಸುವ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ನನಗೆ ನಂಬಿಕೆ ಇಲ್ಲ ಎಂದು ಅಯಾಲಿ ಹೇಳಿದ್ದಾರೆ.
ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಅವರು ಪಂಜಾಬ್‌ನ ಸಮಸ್ಯೆಗಳನ್ನು ಪರಿಹರಿಸಲಿಲ್ಲ. ಇದು ಸ್ವಾರ್ಥವೋ ಅಥವಾ ಇನ್ನೇನೋ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧವೂ ಕಿಡಿಕಾರಿದ್ದಾರೆ.
ಸಿಖ್ ಸಮುದಾಯದ ಭಾವನೆಗಳು, ಪಂಜಾಬ್‌ನ ಸಮಸ್ಯೆಗಳು ಮತ್ತು ನನ್ನ ಆತ್ಮಸಾಕ್ಷಿಯ ಧ್ವನಿಯನ್ನು ಆಲಿಸಿ ನಾನು ಇಂದು ರಾಷ್ಟ್ರಪತಿ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತಿಲ್ಲ ಎಂದು ಆಯಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ರಾಷ್ಟ್ರಪತಿ ಚುನಾವಣೆ – ಜು.25ಕ್ಕೆ ಪ್ರಮಾಣವಚನ
ದ್ರೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯದಿಂದ ಬಂದವರು. ಅವರ ವಿಚಾರವಾಗಿ ನನಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಸಿಖ್ ಕೈದಿಗಳ ಬಿಡುಗಡೆ, ಚಂಡೀಗಢದ ಮೇಲೆ ಪಂಜಾಬ್‌ನ ಹಕ್ಕುಗಳು ಮತ್ತು ಸಟ್ಲೇಜ್-ಯಮುನಾ ಜೋಡಣೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.