ಮುಂಬೈ: ಪ್ರಾಣಿ ದಯಾ ಸಂಘದ ಕಾರ್ಯಕರ್ತೆಯೊಬ್ಬರಿಗೆ ಸ್ಥಳೀಯರು ಥಳಿಸಿದ ಅಮಾನವೀಯ ಘಟನೆಯೊಂದು ಪಶ್ಚಿಮ ಅಂಧೇರಿಯಲ್ಲಿ ನಡೆದಿದೆ. ಲೋಕಂಡ್ ವಾಲನಲ್ಲಿರುವ ತಮ್ಮ ಮನೆಯ ಹೊರಗಡೆಯೇ 62 ವರ್ಷದ ಅಂಜಲಿ ಚೌಧರಿ ಥಳಿತಕ್ಕೊಳಗಾಗಿದ್ದಾರೆ.
ನಾನು ಕಳೆದ 25 ವರ್ಷಗಳಿಂದ ಬೀದಿ ನಾಯಿ ಹಾಗೂ ಬೆಕ್ಕುಗಳಿಗೆ ಆಹಾರ ನೀಡುತ್ತಾ ಬಂದಿದ್ದೇನೆ. ಆದರೆ 2 ವಾರಗಳಿಂದ ಸಮಾಜದ ಕೆಲ ವ್ಯಕ್ತಿಗಳು ನನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಅಲ್ಲದೆ ನಮ್ಮ ಕಟ್ಟಡದ ಹತ್ತಿರ ಬೀದಿ ನಾಯಿಗಳಿಗೆ ಆಹಾರ ಹಾಕಬೇಡ ಎಂದು ಬೆದರಿಸುತ್ತಿದ್ದಾರೆ. ಯಾಕಂದರೆ ಅವುಗಳಿಗೆ ಅನ್ನ ಹಾಕಿದರೆ ಅವುಗಳು ನಮ್ಮ ಮನೆ ಸುತ್ತಲೇ ಸುತ್ತುತ್ತಿರುತ್ತವೆ. ಇದರಿಂದ ನಮಗೆ ತೊಂದರೆಯಾಗುತ್ತದೆ ಎಂದು ನನ್ನ ವಿರುದ್ಧ ಕಿಡಿಕಾರುತ್ತಿದ್ದಾರೆ ಎಂದು ಎನ್‍ಜಿಓ ನಡೆಸುತ್ತಿರುವ ಅಂಜಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
Advertisement
Advertisement
ಗುರುವಾರ ಮಧ್ಯಾಹ್ನದ ಬಳಿಕ ನಾನು ಬೆಕ್ಕು ಹಾಗು ನಾಯಿಗಳಿಗೆ ಆಹಾರ ನೀಡುತ್ತಿದ್ದೆ. ಈ ವೇಳೆ ಕೆಲ ವ್ಯಕ್ತಿಗಳು ಬಂದು ನನ್ನ ಜೊತೆ ವಾಗ್ವಾದ ನಡೆಸಿದರು. ಅಲ್ಲದೆ ನನ್ನನ್ನು ದೂಡಿದ್ದಾರೆ. ಇದರಿಂದ ಕೆಳಗೆ ಬಿದ್ದಿದ್ದು, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ನಾನು ಬೇರೆ ಪ್ರಾಣಿ ದಯಾ ಸಂಘದವರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಕೇಳಿಕೊಂಡೆ. ಹಾಗೆಯೇ ಸಂಘದವರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಅವರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಅಸಭ್ಯವಾಗಿ ವರ್ತಿಸಿದ್ದಾರೆ.
Advertisement
ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ನಾನು ಪೊಲೀಸರಿಕೆ ಕರೆ ಮಾಡಿ ಮಾಹಿತಿ ನೀಡಿದೆವು. ಹೀಗಾಗಿ ಸ್ಥಳಕ್ಕೆ ಬಂದ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದು, ಆದರೆ ಇದುವರೆಗೂ ಯಾರೊಬ್ಬರನ್ನೂ ಬಂಧಿಸಿಲ್ಲ ಎಂದು ಚೌಧರಿ ಆರೋಪಿಸಿದ್ದಾರೆ.
Advertisement
ಘಟನಾ ಸ್ಥಳಕ್ಕೆ ಬಂದು ಪೊಲೀಸರು ಆ ಕೂಡಲೇ ಎಫ್‍ಐಆರ್ ದಾಖಲಿಸಿಕೊಂಡಿಲ್ಲ. ಆ ದಿನ ಅವರು ಎಫ್‍ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಹೀಗಾಗಿ ನಾನು ಡಿಸಿಪಿ ಪರಮ್ಜಿತ್ ಸಿಂಗ್ ಅವರನ್ನು ಭೇಟಿಯಾದೆ. ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪೊಲೀಸರು ಎಫ್‍ಆರ್ ದಾಖಲಿಸಿಕೊಂಡರು ಎಂದು ಸಂಘದ ಮತ್ತೊಬ್ಬ ಕಾರ್ಯಕರ್ತ ಸಂಜೀವ್ ಚೋಪ್ಡಾ ಆರೋಪಿಸಿದ್ದಾರೆ.
ಚೌಧರಿ ಅವರು ಸುಮಾರು 500ಕ್ಕಿಂತಲೂ ಹೆಚ್ಚು ನಾಯಿ ಹಾಗೂ ಬೆಕ್ಕುಗಳಿಗೆ ಪ್ರತಿದಿನ ಆಹಾರ ನೀಡುತ್ತಿದ್ದಾರೆ. ಅದಕ್ಕಾಗಿ ಅವರು ಸುಮಾರು 80 ಕೆ.ಜಿ ಆಹಾರ ರೆಡಿ ಮಾಡುತ್ತಾರೆ. ಹೀಗೆ ರೆಡಿಯಾದ ಆಹಾರವನ್ನು ಬೀದಿ ಬೀದಿಗಳಿಗೆ ತಮ್ಮ ವಾಹನದಲ್ಲಿ ತೆರಳಿ ನಾಯಿ ಮತ್ತು ಬೆಕ್ಕುಗಳಿಗೆ ಆಹಾರ ನೀಡಿ ಬರುತ್ತಾರೆ ಎಂದು ಚೋಪ್ಡಾ ತಿಳಿಸಿದ್ದಾರೆ.
ಸದ್ಯ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಸಂಬಂಧ ಕಾರ್ಯಕರ್ತೆ ನೀಡಿದ ದೂರು ಹಾಗೂ ಹಾಗೂ ವಿಡಿಯೋ ಆಧರಿಸಿ ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.