ನಟ ಸುದೀಪ್ (Sudeep) ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಅಮ್ಮನ ನಿಧನದಿಂದ ಸುದೀಪ್‌ಗೆ ಆಘಾತವಾಗಿದೆ. ಈ ಹಿನ್ನೆಲೆ ಸುದೀಪ್ ತಾಯಿಯ ಅಂತಿಮ ದರ್ಶನ ಪಡೆಯಲು ಸ್ಯಾಂಡಲ್‌ವುಡ್ ನಟ, ನಟಿಯರು ಮತ್ತು ರಾಜಕೀಯ ಗಣ್ಯರು ನಟನ ಮನೆಗೆ ಆಗಮಿಸುತ್ತಿದ್ದಾರೆ. ಇದೀಗ ಅಂತಿಮ ದರ್ಶನ ಪಡೆದ ಬಳಿಕ ಹಿರಿಯ ನಟಿ ಜಯಮಾಲ (Jayamala) ಮಾತನಾಡಿ, ತಾಯಿಯನ್ನು ಇಷ್ಟೊಂದು ಪ್ರೀತಿಸುವ ವ್ಯಕ್ತಿಯನ್ನು ನಾನೆಲ್ಲೂ ನೋಡಿಲ್ಲ ಎಂದು ಸುದೀಪ್ ಕುರಿತು ಹೇಳಿದ್ದಾರೆ.
ಸರೋಜಮ್ಮ ನನಗೆ 1979ರಿಂದ ಪರಿಚಯ. ನಾನು ಯಾವತ್ತೂ ಅವರಲ್ಲಿ ಅಕ್ಕನನ್ನ ಕಾಣಲಿಲ್ಲ, ತಾಯಿಯನ್ನ ಕಾಣುತ್ತಿದ್ದೆ ಎಂದಿದ್ದಾರೆ.
ಅವರ ಜೊತೆ ತುಂಬಾ ಒಡನಾಟ ಇತ್ತು. ಅವರೊಂದು ಸಾಮ್ರಾಜ್ಯವನ್ನೇ ಕಟ್ಟಿದ್ದರು. ಅದಕ್ಕೆ ಪಿಲ್ಲರ್ ಆಗಿ ನಿಂತುಕೊಂಡಿದ್ದರು. ಎಲ್ಲರಿಗೂ ಸಮಾಧಾನ ಹೇಳೋರು, ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ದರು. ಇವತ್ತು ಒಂದೊಳ್ಳೆಯ ಹೃದಯ ನಮ್ಮನ್ನು ಬಿಟ್ಟು ಹೋಗಿದೆ ಎಂದು ಜಯಮಾಲಾ ಭಾವುಕರಾಗಿದ್ದಾರೆ.
ಸುದೀಪ್‌ಗೆ ಅವನ ತಾಯಿಯೇ ಅಸ್ಥಿತ್ವ, ಇದೀಗ ತನ್ನ ಅಸ್ತಿತ್ವವನ್ನೇ ಸುದೀಪ್ ಕಳೆದುಕೊಂಡೆ ಅಂತ ಅವರಿಗೆ ಕಷ್ಟ ಆಗುತ್ತಿದೆ. ತಾಯಿಯನ್ನ ಇಷ್ಟೊಂದು ಪ್ರೀತಿಸುವ ವ್ಯಕ್ತಿಯನ್ನ ನಾನು ಎಲ್ಲೂ ಕಂಡಿಲ್ಲ. ತಾಯಿನ ಕಂಡರೆ ಅಷ್ಟು ಅಗಾಧವಾದ ಪ್ರೀತಿಯಿತ್ತು. ಅವರ 2 ಹೆಣ್ಣುಮಕ್ಕಳಿಗೆ ಧೈರ್ಯ ಕೊಡಲಿ. ಸರೋಜಮ್ಮ ಇಡೀ ಹೆಣ್ಣು ಕುಲಕ್ಕೆ ಮಾದರಿಯಾಗಿದ್ದರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಜಯಮಾಲ ಮಾತನಾಡಿದ್ದಾರೆ. ಇದನ್ನೂ ಓದಿ:ಕನ್ನಡದಲ್ಲೇ ಪತ್ರ ಬರೆದು ಸುದೀಪ್ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ ಪವನ್ ಕಲ್ಯಾಣ್
ಅಂದಹಾಗೆ, ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ತಾಯಿ ಇಂದು (ಅ.20) ಬೆಳಗ್ಗೆ 7:04ಕ್ಕೆ ವಿಧಿವಶರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.