ಮುಂಬೈ: ಬೀದಿನಾಯಿ (Stray Dogs) ಗಳನ್ನು ಅಸ್ಸಾಂಗೆ ಕಳುಹಿಸಿ, ಅಲ್ಲಿ ಅವರು ಅದನ್ನು ತಿನ್ನುತ್ತಾರೆ ಎಂದು ಹೇಳಿಕೆ ನೀಡಿ ಮಹಾರಾಷ್ಟ್ರ ಶಾಸಕ ಓಂಪ್ರಕಾಶ್ ಬಾಬುರಾವ್ ಕಡು (Omprakash Babarao Kadu) ಯಾನೇ ಬಚ್ಚು ಕಡು ವಿವಾದಕ್ಕೀಡಾಗಿದ್ದಾರೆ.
ಬೀದಿನಾಯಿಗಳ ನಿಯಂತ್ರಣವಾಗಬೇಕಾದರೆ ಅವುಗಳನ್ನು ಅಸ್ಸಾಂಗೆ ಕಳುಹಿಸಬೇಕು. ಯಾಕೆಂದರೆ ಅಲ್ಲಿನ ಜನರು ಬೀದಿನಾಯಿಗಳನ್ನು ತಿನ್ನುತ್ತಾರೆ ಎಂದು ಹೇಳಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಶಾಸಕರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಜನ ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ: ಬೀದಿ ಹೆಣ್ಣುನಾಯಿಯ ಮೇಲೆ ಅತ್ಯಾಚಾರ – ವಿಕೃತಕಾಮಿ ವಿರುದ್ಧ ಕೇಸ್
ವಿಚಾರ ಬಂದಿದ್ದೇಗೆ..?: ವಿಧಾನಸಭೆಯಲ್ಲಿ ರಾಜ್ಯದಲ್ಲಿ ಬೀದಿ ನಾಯಿಗಳಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವೇಳೆ ಮಾತನಾಡಿದ ಶಾಸಕರು, ಬೀದಿ ನಾಯಿಗಳ ನಿಯಂತ್ರಣವಾಗಬೇಕಾದರೆ ಅವುಗಳನ್ನು ತಿನ್ನಲು ಅಸ್ಸಾಂ (Assam) ಗೆ ಕಳುಹಿಸಬೇಕು. ನಾನು ಇತ್ತೀಚೆಗಷ್ಟೇ ಅಸ್ಸಾಂಗೆ ಭೇಟಿ ನೀಡಿದ್ದೆ. ಈ ವೇಳೆ ಅಲ್ಲಿ ಬೀದಿ ನಾಯಿಗಳನ್ನು 8 ಸಾವಿರದಿಂದ 9 ಸಾವಿರ ರೂ.ಗೆ ಮಾರಾಟ ಮಾಡುತ್ತಿರುವುದು ತಿಳಿದುಬಂತು ಎಂದರು.
ಸದ್ಯ ಶಾಸಕರ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಹಿಂದೆ ಜಾರ್ಖಂಡ್ ಬಿಜೆಪಿ ಶಾಸಕ ಬಿರಂಚಿ ನಾರಾಯಣ್ ಅವರು, ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡುವ ಸಮಸ್ಯೆಗೆ ರಾಜ್ಯ ಸರ್ಕಾರ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ, ನಾಗಾಲ್ಯಾಂಡ್ ಜನರಿಗೆ ಕರೆ ಮಾಡಿ ಸಮಸ್ಯೆ ದೂರವಾಗುತ್ತದೆ ಎಂದು ಹೇಳಿ ಪೇಚಿಗೆ ಸಿಲುಕಿದ್ದರು.