ಜನಪ್ರತಿನಿಧಿಗಳಿಂದಲೇ ಹಂಚಿಕೆ – ಮಂಡ್ಯದಲ್ಲಿ ‘ಸೀತಾರಾಮ ಕಲ್ಯಾಣ’ ಸಿನಿಮಾ ಟಿಕೆಟ್ ಫ್ರೀ!

Public TV
2 Min Read
seetharamakalyana

ಮಂಡ್ಯ: ಮುಂಬರುವ ಲೋಕಸಬಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ. ಆದರೆ ಇದೀಗ ಮಂಡ್ಯದ ಜೆಡಿಎಸ್ ಮುಖಂಡರು ನಿಖಿಲ್ ಕುಮಾರಸ್ವಾಮಿ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರದ ಟಿಕೆಟ್‍ಗಳನ್ನು ಹಳ್ಳಿ ಹಳ್ಳಿಗಳಲ್ಲಿ ಉಚಿತವಾಗಿ ಹಂಚುವ ಮೂಲಕ ಈಗಿನಿಂದಲೇ ನಿಖಿಲ್ ಪರವಾಗಿ ಪ್ರಚಾರ ಆರಂಭಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಆಗುತ್ತಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಜೋರಾಗಿದೆ. ಸ್ವತಃ ಜೆಡಿಎಸ್ ಮುಖಂಡರು, ಪಕ್ಷದ ವರಿಷ್ಠರ ಬಳಿ ತೆರಳಿ ನಿಖಿಲ್‍ಗೆ ಟಿಕೆಟ್ ನೀಡುವಂತೆ ಒತ್ತಾಯ ಕೂಡ ಮಾಡಿದ್ದಾರೆ. ಇದೆಲ್ಲ ಸತ್ಯ ಎಂಬ ರೀತಿಯಲ್ಲಿ, ಚುನಾವಣೆವರೆಗೂ ನಿಖಿಲ್ ಕುಮಾರಸ್ವಾಮಿ ಎಲ್ಲರ ಮನದಲ್ಲೂ ಉಳಿಯಲಿ ಎಂಬ ಉದ್ದೇಶದಿಂದ ಸೀತಾರಾಮ ಕಲ್ಯಾಣ ಚಿತ್ರದ ಟಿಕೆಟ್‍ಗಳನ್ನು ಜೆಡಿಎಸ್ ಮುಖಂಡರು ಮತ್ತು ಜನಪ್ರತಿನಿಧಿಗಳು ಮಂಡ್ಯದ ಹಳ್ಳಿ ಹಳ್ಳಿಗಳಲ್ಲಿ ಉಚಿತವಾಗಿ ಹಂಚುತ್ತಿದ್ದಾರೆ.

nmd 1

ರೈತರ ಕಷ್ಟಕ್ಕೆ ಮಿಡಿಯುವ, ರೈತ ಪರ ಕಾಳಜಿಯುಳ್ಳ ಯುವಕನ ಪಾತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಮಂಡ್ಯದ ಎಲ್ಲ ಜನರಿಗೂ ಉಚಿತವಾಗಿ ತೋರಿಸುವ ಮೂಲಕ, ನಿಖಿಲ್ ಎಲ್ಲರ ಮನಸ್ಸಲ್ಲೂ ಸ್ಥಾನ ಗಿಟ್ಟಿಸಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಲಭವಾಗಿ ಮತ ಪಡೆಯುವಂತಾಗಲಿ ಎಂಬ ಉದ್ದೇಶದಿಂದ ಜೆಡಿಎಸ್ ಮುಖಂಡರು ಹಳ್ಳಿ ಹಳ್ಳಿಗಳಲ್ಲಿ ಉಚಿತವಾಗಿ ಚಿತ್ರದ ಟಿಕೆಟ್ ಹಂಚುತ್ತಿರುವ ಮಾತು ಕೇಳಿ ಬರುತ್ತಿದ್ದು, ಈ ಬಗ್ಗೆ ಹಲವರು ವ್ಯಂಗ್ಯವಾಡಿದ್ದಾರೆ ಎಂದು ರೈತ ಮುಖಂಡರಾದ ಸುಧೀರ್ ಕುಮಾರ್ ಮತ್ತು ಚಂದ್ರಶೇಖರ್ ಹೇಳಿದ್ದಾರೆ.

nmd 3

ನಿಖಿಲ್ ಕುಮಾರಸ್ವಾಮಿ ಚಿತ್ರದ ಯಶಸ್ಸಿಗೆ ಶುಭ ಕೋರಿ ಹಾಕಿರುವ ಎಲ್ಲ ಬ್ಯಾನರ್ ಗಳಲ್ಲೂ ಮಂಡ್ಯ ಜಿಲ್ಲೆಯ ಜೆಡಿಎಸ್ ಮುಖಂಡರು, ಜನಪ್ರತಿನಿಧಿಗಳು ರಾರಾಜಿಸುತ್ತಿದ್ದಾರೆ. ಜನಪ್ರತಿನಿಧಿಗಳು ಜನರ ಸಮಸ್ಯೆ ಬಗೆಹರಿಸೋದು ಬಿಟ್ಟು ನಾಮುಂದು ತಾಮುಂದು ಎಂಬ ರೀತಿ ಚಿತ್ರದ ಪ್ರಮೋಷನ್‍ಗೆ ಮುಂದಾಗಿರುವುದಕ್ಕೂ ಟೀಕೆ ವ್ಯಕ್ತವಾಗಿದೆ. ಆದರೆ ಉಚಿತ ಟಿಕೆಟ್ ಹಂಚಿಕೆ ಆರೋಪ ನಿರಾಕರಿಸುತ್ತಿರುವ ಮಂಡ್ಯ ಶಾಸಕ ಶ್ರೀನಿವಾಸ್, ಇದೆಲ್ಲ ರಾಜಕೀಯ ವಿರೋಧಿಗಳು ಆಧಾರವಿಲ್ಲದೆ ಮಾಡುತ್ತಿರವ ಕುಹಕವಾಗಿದೆ. ನಿಖಿಲ್ ಈಗಾಗಲೇ ಎಲ್ಲರಿಗೂ ಚಿರಪರಿಚಿತವಾಗಿರುವ ಯುವ ನಾಯಕರಾಗಿದ್ದು, ಒಂದು ಒಳ್ಳೆಯ ಚಿತ್ರವನ್ನು ಜನ ಇಷ್ಟಪಟ್ಟು ನೋಡುತ್ತಾರೆ ಎಂದು ಹೇಳಿದ್ದಾರೆ.

nmd 5

ಸೀತಾರಾಮ ಕಲ್ಯಾಣ ಚಿತ್ರ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅಭಿನಯಿಸಿರುವ ಕಾರಣಕ್ಕೆ, ಮಂಡ್ಯದಲ್ಲಿ ರಾಜಕೀಯವಾಗಿಯೂ ಚರ್ಚೆಗೆ ಗ್ರಾಸವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article