– ಷರಿಯಾ ಕಾನೂನಿನೊಂದಿಗೆ ಮುಸ್ಲಿಮರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ
ನವದೆಹಲಿ: ಮುಸ್ಲಿಮರಿಗೆ ಏಕರೂಪ ಅಥವಾ ಜಾತ್ಯತೀತ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ. ಷರಿಯಾ ಕಾನೂನಿನೊಂದಿಗೆ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.
ಪ್ರಧಾನ ಮಂತ್ರಿಗಳು ಜಾತ್ಯತೀತ ನಾಗರಿಕ ಸಂಹಿತೆಗಾಗಿ ಕರೆ ನೀಡಿರುವುದನ್ನು ಪರಿಗಣಿಸುತ್ತದೆ. ಆದರೆ ಧಾರ್ಮಿಕ ವೈಯಕ್ತಿಕ ಕಾನೂನುಗಳನ್ನು ಕೋಮುವಾದ ಎಂದು ಕರೆಯುವುದು ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಮಂಡಳಿ ತಿಳಿಸಿದೆ.
ಮುಸ್ಲಿಂ ವೈಯಕ್ತಿಕ ಕಾನೂನಿನೊಂದಿಗೆ ಎಂದಿಗೂ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಜಾತ್ಯತೀತ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ. ಮಂಡಳಿಯ ವಕ್ತಾರ ಡಾ ಎಸ್‌ಕ್ಯೂಆರ್ ಇಲ್ಯಾಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಧರ್ಮದ ಆಧಾರದ ಮೇಲೆ ವೈಯಕ್ತಿಕ ಕಾನೂನುಗಳನ್ನು ಕೋಮುವಾದ ಎಂದು ಕರೆಯುವ ಮತ್ತು ಜಾತ್ಯತೀತ ನಾಗರಿಕ ಸಂಹಿತೆಯ ಮೂಲಕ ಅವುಗಳನ್ನು ಮತ್ತಷ್ಟು ಬದಲಿಸುವ ಪ್ರಧಾನಿಯವರ ಘೋಷಣೆಯ ಬಗ್ಗೆ ನಮಗೆ ಆತಂಕವಿದೆ ಎಂದು ಹೇಳಿದ್ದಾರೆ.
ಇತರ ಸಮುದಾಯಗಳ ಕೌಟುಂಬಿಕ ಕಾನೂನುಗಳು ತಮ್ಮದೇ ಆದ ಧಾರ್ಮಿಕ ಮತ್ತು ಪುರಾತನ ಸಂಪ್ರದಾಯಗಳನ್ನು ಆಧರಿಸಿವೆ. ಆದ್ದರಿಂದ, ಅವುಗಳನ್ನು ಬದಲಿಸುವುದು ಮತ್ತು ಎಲ್ಲರಿಗೂ ಜಾತ್ಯತೀತವಾದವುಗಳನ್ನು ಸೃಷ್ಟಿಸಲು ಪ್ರಯತ್ನಿಸುವುದು ಧರ್ಮದ ನಿರಾಕರಣೆ ಮತ್ತು ಪಾಶ್ಚಿಮಾತ್ಯರ ಅನುಕರಣೆಯಾಗಿದೆ ಎಂದಿದ್ದಾರೆ.