ಬಾಗಲಕೋಟೆ: ಬೆಳ್ಳಂಬೆಳಗ್ಗೆ ಉಳಿ, ಚಾಣ, ಸುತ್ತಿಗೆ ಹಿಡಿದರೆ ಕಲ್ಲು ಮಣಿಸುವುದೇ ಅವರ ನಿತ್ಯದ ಕಾಯಕ. ಕಲ್ಲು ತಂದು ಅದಕ್ಕೊಂದು ರೂಪ ಕೊಟ್ಟು ಶಿಲ್ಪಗಳನ್ನು ತಯಾರಿಸುತ್ತಾರೆ. ಲಲಿತಕಲಾ ಸೇವೆಗೆ ನೀಡುವ ಯಾವುದೇ ಸವಲತ್ತು ಸಿಕ್ಕಿಲ್ಲವಾದರೂ ತಮ್ಮ ಕಲೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅವರು ಯಾರಿರಬಹುದು ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತಿವೆಯಾ? ಅವರೇ ಬಾಗಲಕೋಟೆ (Bagalakote) ಜಿಲ್ಲೆ ಮುಧೋಳ ತಾಲೂಕಿನ ಲಕ್ಷಾನಟ್ಟಿ ಗ್ರಾಮದ ಲೋಕಣ್ಣ ಬಡಿಗೇರ (Lokanna Badigera).
ಮೂರ್ತಿ ಕೆತ್ತನೆಗೆ ಆಸಕ್ತಿ, ತಾಳ್ಮೆ, ಏಕಾಗ್ರತೆ ಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಆ ದಿನದ ಶ್ರಮ ಸಂಪೂರ್ಣ ವ್ಯರ್ಥ. ಆದರೂ ಕಲೆಯನ್ನೇ (Art) ನಂಬಿ ಜೀವನ ನಡೆಸುತ್ತಿದೆ ಲೋಕಣ್ಣ ಬಡಿಗೇರ ಕುಟುಂಬ. ತಾತ-ಮುತ್ತಾತಂದಿರ ಕಾಲದಿಂದಲೂ ಕಲೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಎಲೆಮರೆಯ ಕಾಯಿಯಂತೆ ಶಿಲ್ಪಕಲಾ ಕ್ಷೇತ್ರದಲ್ಲಿ ನೈಪುಣ್ಯ ಮೈಗೂಡಿಸಿಕೊಂಡಿದ್ದಾರೆ. ಇಂತಹ ಪ್ರತಿಭಾವಂತ ಕೊರೊನಾ ನಂತರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿಲ್ಪಕಲಾ ಅಕಾಡೆಮಿಗಳಿಂದ ಸಹಾಯ ಕೋರಿದ್ದಾರೆ.
Advertisement
Advertisement
ನೋಡುಗರ ಕಣ್ಣಿಗೆ ಬರೀ ಕಲ್ಲು ಕಂಡರೆ, ಶಿಲ್ಪಿಯ (Sculptor) ಕೈಯಲ್ಲಿ ಸುಂದರ ಮೂರ್ತಿಯಾಗಿ ಹೊರಹೊಮ್ಮುತ್ತದೆ. ಕೆತ್ತನೆ ಕಾರ್ಯವನ್ನು ಯಾವ ಹಂತದಲ್ಲಿಯೂ ಲೋಪವಾಗದಂತೆ ಎಚ್ಚರವಹಿಸಿ ಕಲ್ಲನ್ನು ಕೆತ್ತಿ ಸುಂದರ ಶಿಲ್ಪವನ್ನು ರೂಪಿಸುತ್ತಾರೆ.
Advertisement
ದಿನಕ್ಕೆ 2 ತಾಸು ಮೂರ್ತಿಗಳ ಕೆತ್ತನೆಯಲ್ಲಿ ತೊಡಗಿಕೊಳ್ಳುತ್ತಾರೆ. 1 ಮೂರ್ತಿ ರೂಪುಗೊಳ್ಳಲು ಎರಡರಿಂದ ನಾಲ್ಕು ತಿಂಗಳು ಸಮಯ ಹಿಡಿಯುತ್ತದೆ. 2 ಇಂಚಿನ ಮೂರ್ತಿಯಿಂದ, 9 ಅಡಿ ಉದ್ದದ ಮೂರ್ತಿಯವರೆಗೂ ಶಿಲ್ಪ ಕೆತ್ತನೆ ಮಾಡುತ್ತಾರೆ.
Advertisement
ಕಲಾವಿದ ಲೋಕಣ್ಣ ಬಡಿಗೇರ ಅವರ ಕಲಾಕುಸುರಿಯಿಂದ ಶಿವ, ಹನುಮಂತ, ತ್ರಯಂಬಕೇಶ್ವರಿ, ದುರ್ಗಾದೇವಿ, ವಾಲ್ಮೀಕಿ ಮೂರ್ತಿಗಳು, ಸಿದ್ಧಾರೊಢ, ಶಿವಾಜಿ, ವೀರಭದ್ರೇಶ್ವರ, ಗಣಪತಿ, ಬುದ್ಧ, ಬಸವ ಸೇರಿದಂತೆ ದೇವಸ್ಥಾನದ ದ್ವಾರಗಳು ಸಿದ್ಧಗೊಂಡಿವೆ. ಇವರ ಕೈಯಿಂದ ಅರಳಿದ ಕಲಾಕೃತಿಗಳು ಹೈದರಾಬಾದ್, ಆಂಧ್ರ, ತೆಲಂಗಾಣ ರಾಜ್ಯಗಳಿಗೂ ಮಾರಾಟವಾಗಿವೆ. ಮುಂಗಡವಾಗಿ ಬೇಡಿಕೆ ಸಲ್ಲಿಸಿ ಜನರು ಮೂರ್ತಿಗಳನ್ನು ಕೆತ್ತಿಸಿಕೊಳ್ಳಬಹುದಾಗಿದೆ.
ಈ ಬಗ್ಗೆ ಮಾತನಾಡಿರುವ ವಿಶ್ವಕರ್ಮ ಶಿಲ್ಪಕಲಾವಿದ ಲೋಕಣ್ಣ ಬಡಿಗೇರ, ತನಗೆ ಶಿಲ್ಪಕಲೆ ಬಿಟ್ಟು ನನಗೆ ಬೇರೆ ಗೊತ್ತಿಲ್ಲ. ಈ ಕಲೆಯೇ ಜೀವನಾಧಾರ. 20 ವರ್ಷಗಳಿಂದ ನಾನು ಶಿಲ್ಪಕಲೆ ಮತ್ತು ಕ್ಲೇ ಮೋಡ್ಲಿಂಗ್ (ಮಣ್ಣಿನ ಮೂರ್ತಿ) ಮಾಡುತ್ತಿದ್ದೇನೆ. ಈ ಶಿಲ್ಪಕಲೆ ನಮ್ಮ ಅಜ್ಜಿ ಮುತ್ತಜ್ಜನ ಕಾಲದಿಂದಲೂ ತಂದೆ ಮಾಡಿಕೊಂಡು ಬರುತ್ತಿದ್ದ ಕೆಲಸ ಮುಂದುವರಿಸಿಕೊಂಡು ಬಂದಿದ್ದೇವೆ. 20 ವರ್ಷದಲ್ಲಿ ಸಾವಿರಾರು ಮೂರ್ತಿ ಕೆತ್ತನೆ ಮಾಡುವುದರ ಮೂಲಕ ಜನಮನ ಗಳಿಸಿದ್ದೇನೆ. ಜನರು ಬಂದು ತಮ್ಮಿಷ್ಟದ ಮೂರ್ತಿ ಮಾಡಿಸಿಕೊಂಡು ಹೋಗ್ತಾರೆ. ಆದ್ರೆ, ಇಷ್ಟೇ ಹಣ ಕೊಡಬೇಕು ಎಂದು ಯಾರಿಗೂ ಒತ್ತಾಯಿಸುವುದಿಲ್ಲ. ಅವರು ನೀಡುವ ಹಣದಲ್ಲಿಯೇ ಸಂತೃಪ್ತ ಜೀವನ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಆದರೀಗ ಕಲ್ಲಲ್ಲಿ ಕಲೆಯನ್ನು ಅರಳಿಸುವ ಕಲಾವಿದನಿಗೆ ಸರ್ಕಾರದ ನೆರವು ಬೇಕಿದೆ. ಲೋಕಣ್ಣ ಬಡಿಗೇರ ಅವರನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂಬುದು ಕಲಾಪ್ರಿಯರ ಒತ್ತಾಸೆ.