ಕಾರವಾರ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪನೆಗೊಂಡಿರುವ ಬಾಲಕ ರಾಮನ ವಿಗ್ರಹವನ್ನು ಕೆತ್ತಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಡಾ. ಹಿರೇಮಠ ಫೌಂಡೇಷನ್ ವತಿಯಿಂದ ಸೋಮವಾರ ಪ್ರತಿಷ್ಠಿತ “ಅಭಿನವ ಅಮರಶಿಲ್ಪಿ” ಬಿರುದು ನೀಡಿ ಗೌರವಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಾಗರ್ ದರ್ಶನ್ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅವರನ್ನು ಪುರಸ್ಕರಿಸಲಾಯಿತು.
Advertisement
ದಾಂಡೇಲಿಯ ಮ್ಯಾಕ್ಸಿಲೋಫೇಷಿಯಲ್ ಸರ್ಜನ್ ಡಾ.ವಿಶ್ವನಾಥ ಹಿರೇಮಠ ಅವರು ಈ ಪ್ರತಿಷ್ಠಾನದ ನೇತೃತ್ವ ವಹಿಸಿಕೊಂಡಿದ್ದಾರೆ. ಇದು ರಾಜ್ಯದಾದ್ಯಂತ ಆಸ್ಪತ್ರೆಗಳ ಜಾಲವನ್ನು ಹೊಂದಿದೆ. ಮೈಸೂರು ಜಿಲ್ಲೆಯಿಂದ ತೆಗೆದುಕೊಂಡು ಹೋಗಿರುವ ಕೃಷ್ಣ ಶಿಲೆಯಿಂದ ಕೆತ್ತಿದ 51 ಇಂಚಿನ ರಾಮಲಲ್ಲಾನ ಮೂರ್ತಿಗೆ ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಲಾಗಿದೆ. ಅರುಣ್ ಯೋಗಿರಾಜ್ ಅವರು ಈ ಮೂರ್ತಿ ನಿರ್ಮಿಸಿದ್ದು, ಜನವರಿ 22ರಂದು ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರಾಣಪ್ರತಿಷ್ಠಾಪನೆ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಎಲ್ಲರೂ ಜೇಬಿನಲ್ಲಿ ಟಿಕೆಟ್ ಇಟ್ಕೊಂಡು ಓಡಾಡ್ತಿದ್ದಾರೆ: ಅನಂತ್ ಕುಮಾರ್ ಹೆಗಡೆ
Advertisement
Advertisement
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು, ಅಯೋಧ್ಯೆಯಲ್ಲಿ ಇಡೀ ದೇಶವೇ ಬೆರಗಾಗುವಂತಹ ಅದ್ಭುತ ಶ್ರೀರಾಮ ಮಂದಿರ ನಿರ್ಮಿಸಿ ಉದ್ಘಾಟಿಸಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ. ಮೋದಿಯವರಲ್ಲದೇ ಮತ್ಯಾರಿಂದಲೂ ಈ ಕೆಲಸ ಕೈಗೂಡುವುದು ಅಸಾಧ್ಯದ ಮಾತಾಗಿತ್ತು. ದೇಶದ ಜನತೆ ಶ್ರೀ ರಾಮನ ಮೇಲಿಟ್ಟಿರುವ ಶೃದ್ಧಾಭಕ್ತಿಗೆ ಬೆರಗಾಗಿದ್ದೇನೆ. ತಿಂಗಳೊಪ್ಪತ್ತಿನಲ್ಲಿ 65 ಲಕ್ಷ ಜನರು ಈಗಾಗಲೇ ಅಯೋಧ್ಯೆಯ ನೂತನ ರಾಮಮಂದಿರಕ್ಕೆ ಭೇಟಿ ನೀಡಿರುವುದು ನಿಜಕ್ಕೂ ಅದ್ಭುತ. ಈ ಪ್ರಶಸ್ತಿ ದೊರಕಿರುವುದು ನನಗೆ ಅತೀವ ಸಂತೋಷ ತಂದಿದೆ. ಇದಕ್ಕೆ ಕಾರಣೀಕರ್ತರಾದ ನನ್ನ ಸಹ ಕಲಾವಿದರು, ತಂತ್ರಜ್ಞರು ಹಾಗೂ ತಂಡದ ಪ್ರತಿ ಸದಸ್ಯರಿಗೂ ಈ ಐತಿಹಾಸಿಕ ಕ್ಷಣದಲ್ಲಿ ಧನ್ಯವಾದಗಳನ್ನು ತಿಳಿಸುತ್ತೇನೆ. ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ನನ್ನಲ್ಲಿರುವ ಕಲೆ ಹಾಗೂ ಜ್ಞಾನವನ್ನು ಮುಂದಿನ ಪೀಳಿಗೆಗೆ ಕಲಿಸಿಕೊಟ್ಟು, ಅದನ್ನು ಉಳಿಸಲು ಪಣ ತೊಡಲಿದ್ದೇನೆ ಎಂದರು.
Advertisement
ಬೇಲೂರು ಮತ್ತು ಹಳೆಬೀಡಿನ ಐತಿಹಾಸಿಕ ದೇವಸ್ಥಾನಗಳಲ್ಲಿ ಸುಂದರ ಶಿಲ್ಪಗಳನ್ನು ಕೆತ್ತಿರುವ ಶಿಲ್ಪಿ ಜಕಣಾಚಾರಿಗೆ ಅಮರಶಿಲ್ಪಿ ಎಂಬ ಬಿರುದು ಹೊಂದಿದ್ದಾರೆ. ಅದಕ್ಕೆ ಸಮಾನಾರ್ಥವಾಗಿ ಅಯೋಧ್ಯೆಯ ರಾಮಮಂದಿರದ ಬಾಲಕ ರಾಮನ ಸುಂದರ ಮೂರ್ತಿಯನ್ನು ಕೆತ್ತಿರುವ ಮೈಸೂರು ಮೂಲದ ಅರುಣ್ ಯೋಗಿರಾಜ್ ಗೆ ಡಾ. ಹಿರೇಮಠ ಫೌಂಡೇಷನ್ ಅಭಿನವ ಅಮರಶಿಲ್ಪಿ ಬಿರುದು ನೀಡಿ ಗೌರವಿಸಿತು.
ಇದೇ ಸಮಾರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ 200ಕ್ಕೂ ಅಧಿಕ ಧಾರ್ಮಿಕ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರು ಮಾತನಾಡಿದರು. ಡಾ. ಹಿರೇಮಠ ಫೌಂಡೇಷನ್ ನ ಡಾ. ವಿಶ್ವನಾಥ ಹಿರೇಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.