-ಸಹಜ ಸ್ಥಿತಿಯತ್ತ ಮರಳುತ್ತಿರುವ ಶ್ರೀನಗರ
ಶ್ರೀನಗರ: ಭಾರತ (India) ಹಾಗೂ ಪಾಕಿಸ್ತಾನ (Pakistan) ಕದನ ವಿರಾಮ ಘೋಷಿಸಿದ ಬಳಿಕ ಇದೀಗ ಜಮ್ಮು ಮತ್ತು ಕಾಶ್ಮೀರದ (Jammu Kashmir) ಗಡಿಯೇತರ ಜಿಲ್ಲೆಗಳಲ್ಲಿ ಶಾಲೆಗಳು ಪುನರಾರಂಭಗೊಂಡಿದ್ದು (School Reopen), ಶ್ರೀನಗರ (Srinagar) ಸಹಜ ಸ್ಥಿತಿಯತ್ತ ಮರಳುತ್ತಿದೆ.
ಏ.22ರಂದು ಪಹಲ್ಗಾಮ್‌ನಲ್ಲಿ (Pahalgam) ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಜೋರಾಗಿತ್ತು. ಮೇ 7ರಂದು ಭಾರತೀಯ ಸೇನೆ `ಆಪರೇಷನ್ ಸಿಂಧೂರ’ (Operation Sindoor) ಹೆಸರಿನಲ್ಲಿ ಪಾಕ್‌ನ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಸೇಡು ತೀರಿಸಿಕೊಂಡಿತ್ತು. ಅದಾದ ಬಳಿಕ ಭಾರತ -ಪಾಕ್ ಯುದ್ಧ ಭೀತಿಯಿಂದಾಗಿ ಅಲ್ಲಿನ ಶಾಲೆಗಳನ್ನು ಬಂದ್ ಮಾಡಲಾಗಿತ್ತು.ಇದನ್ನೂ ಓದಿ: Photo Gallery: ‘ಆಪರೇಷನ್ ಸಿಂಧೂರ’ ವೀರರನ್ನು ಭೇಟಿಯಾದ ಪಿಎಂ ಮೋದಿ
ಈ ಕುರಿತು ಜಮ್ಮು ವಿಭಾಗೀಯ ಆಯುಕ್ತರು ಮಾತನಾಡಿ, ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಿಸಿದ ಬಳಿಕ ಗಡಿಯೇತರ ಜಿಲ್ಲೆಗಳಲ್ಲಿ ಶಾಲೆಗಳನ್ನು ಪುನರಾರಂಭಿಸಲಾಗುತ್ತಿದೆ. ಜಮ್ಮು, ಸಾಂಬಾ, ಕಥುವಾ, ರಾಜೌರಿ ಮತ್ತು ಪೂಂಚ್ ಜಿಲ್ಲೆಗಳನ್ನು ಗಡಿ ಜಿಲ್ಲೆಗಳೆಂದು ಗುರುತಿಸಲಾಗಿದ್ದು, ಈ ಜಿಲ್ಲೆಗಳಲ್ಲಿ ಶಾಲೆಗಳು ಸದ್ಯಕ್ಕೆ ಪುನರಾರಂಭಗೊಳ್ಳುವುದಿಲ್ಲ ಎಂದು ತಿಳಿಸಿದರು.
ಪ್ರಸ್ತುತ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ, ಜಮ್ಮು ಪ್ರಾಂತ್ಯದ ಯಾವುದೇ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಪುನರಾರಂಭಿಸಲಾಗುವುದಿಲ್ಲ ಎಂದರು.
ಭಾರತ-ಪಾಕ್ ಉದ್ವಿಗ್ನತೆಯಿಂದಾಗಿ ಮುಚ್ಚಲ್ಪಟ್ಟಿದ್ದ ಕೆಲವು ವಿಮಾನ ನಿಲ್ದಾಣಗಳು ಕಾರ್ಯಾರಂಭಿಸಿದ್ದು, ಈಗಾಗಲೇ ಏರ್ ಇಂಡಿಯಾ (Air India) ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗಳಿಗೆ ವಿಮಾನಗಳನ್ನು ಪ್ರಾರಂಭಿಸುವತ್ತ ಕೆಲಸ ಮಾಡುತ್ತಿದೆ. ಸದ್ಯ ಎರಡು ದಿನಗಳಿಂದ ಯಾವುದೇ ದಾಳಿಯಾಗದ ಹಿನ್ನೆಲೆ ಶ್ರೀನಗರ ಸಹಜ ಸ್ಥಿತಿಗೆ ಮರಳುತ್ತಿದ್ದು, ಪ್ರಮುಖ ಪ್ರವಾಸಿ ಸ್ಥಳಗಳನ್ನು ಪುನರಾರಂಭಿಸಲಾಗುತ್ತಿದೆ. ಅಲ್ಲಲ್ಲಿ ಪ್ರವಾಸಿಗರು ಕಂಡು ಬರುತ್ತಿದ್ದು, ಸಾಮಾನ್ಯ ವ್ಯಾಪಾರ ವಹಿವಾಟು ಮತ್ತೆ ಆರಂಭಗೊಂಡಿದೆ.ಇದನ್ನೂ ಓದಿ: ಶೋಪಿಯಾನ್‌ನಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಮೂವರು ಉಗ್ರರು ಮಟಾಶ್