Connect with us

ಶಾಲೆಯ ನಿರ್ದೇಶಕನಿಂದ 6 ನೇ ತರಗತಿ ಬಾಲಕನ ಮೇಲೆ ಲೈಂಗಿಕ ಶೋಷಣೆ

ಶಾಲೆಯ ನಿರ್ದೇಶಕನಿಂದ 6 ನೇ ತರಗತಿ ಬಾಲಕನ ಮೇಲೆ ಲೈಂಗಿಕ ಶೋಷಣೆ

ಪಟ್ನಾ: ಶಾಲೆಯ ನಿರ್ದೇಶಕನೊಬ್ಬ 6ನೇ ತರಗತಿಯ ಬಾಲಕನ ಮೇಲೆ ನಿರಂತರವಾಗಿ ಮೂರು ವರ್ಷಗಳ ಕಾಲ ಲೈಂಗಿಕ ಶೋಷಣೆ ಎಸಗಿರುವ ಅಘಾತಕಾರಿ ಘಟನೆ ಬಿಹಾರದ ಸಿತಮಾರಿ ಜಿಲ್ಲೆಯಲ್ಲಿ ನಡೆದಿದೆ.

ಘಟನೆ ಬೆಳಕಿಗೆ ಬಂದ ನಂತರ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ನಾಪತ್ತೆಯಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಬಾಲಕ ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆರೋಪಿ ಮೂರು ವರ್ಷಗಳಿಂದ ನಿರಂತವಾಗಿ ಲೈಂಗಿಕ ಶೋಷಣೆ ಎಸಗಿದ್ದಾನೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ತನ್ನ ಕೃತ್ಯದ ಬಗ್ಗೆ ಪೋಷಕರಿಗೆ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಹೀಗಾಗಿ ಬಾಲಕ ತನ್ನ ಮೇಲೆ ನಡೆಯುತ್ತಿರುವ ಶೋಷಣೆ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ. ಆದರೆ ಕಳೆದ ಶುಕ್ರವಾರ ತೀವ್ರವಾಗಿ ನೊಂದ ಬಾಲಕ ಪೋಷಕರ ಬಳಿ ಘಟನೆ ಕುರಿತು ವಿವರವಾಗಿ ತಿಳಿಸಿದ್ದಾನೆ. ತನ್ನ ಮಗನ ಮೇಲೆ ನಡೆದಿರುವ ಕೃತ್ಯದ ಬಗ್ಗೆ ಕೇಳಿದ ಪೋಷಕರು ಅಘಾತಕ್ಕೊಳಗಾಗಿದ್ದಾರೆ.

ಆರೋಪಿ ಬಾಲಕನ ಮೇಲೆ ಲೈಂಗಿಕ ಶೋಷಣೆ ನಡೆಸುವ ವೇಳೆ ಕೆಲವು ರಾಸಾಯನಿಕ ವಸ್ತುಗಳನ್ನು ದೇಹಕ್ಕೆ ಎರಚುತ್ತಿದ್ದ. ಒಂದು ವೇಳೆ ಆತನ ಕೃತ್ಯಕ್ಕೆ ನಿರಾಕರಿಸಿದರೆ ನನ್ನ ಕುಟುಂಬವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಬಾಲಕ ತಿಳಿಸಿದ್ದಾನೆ.

ಆರೋಪಿಯ ಕುರಿತು ಶಾಲಾ ಆಡಳಿತ ಮಂಡಳಿಗೆ ದೂರು ನೀಡಲು ತೆರಳಿದ ಸಂದರ್ಭದಲ್ಲಿ ಬಾಲಕನ ಪೋಷಕರ ವಿರುದ್ಧವೇ ಹಲ್ಲೆ ನಡೆಸಿದ್ದು, ಈ ವೇಳೆಯು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದಾನೆ ಎಂದು ಬಾಲಕನ ಪೋಷಕರು ತಿಳಿದ್ದಾರೆ.

Advertisement
Advertisement