ಬೆಳಗಾವಿ: ಖಾಸಗಿ ಶಾಲಾ ಬಸ್ ಡಿಕ್ಕಿಯಾಗಿ ಐದು ವರ್ಷದ ಬಾಲಕಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮೆಹಬೂಬ್ ನಗರದ ಬಳಿ ನಡೆದಿದೆ.
ರಾಜನಂದಿನಿ(5) ಸ್ಥಳದಲ್ಲೇ ಮೃತಪಟ್ಟ ಬಾಲಕಿ. ರಾಜನಂದಿನಿ ತನ್ನ ತಾಯಿ ಅನುಜಾ ಹಾಗೂ ಸೋದರ ಮಾವ ಪರಶುರಾಮ್ ನೊಂದಿಗೆ ಬುಲೆಟ್ ಬೈಕಿನಲ್ಲಿ ಹೋಗುತ್ತಿದ್ದಳು. ಈ ವೇಳೆ ಖಾಸಗಿ ಶಾಲಾ ಬಸ್ ಬೈಕಿಗೆ ಡಿಕ್ಕಿ ಹೊಡೆದಿದೆ.
ಸೇಂಟ್ ಫ್ರಾನ್ಸಿಸ್ ಪ್ರಾಥಮಿಕ ಶಾಲೆಗೆ ಈ ಬಸ್ ಸೇರಿದ್ದು, ಚಾಲಕ ತಿರುವಿನಲ್ಲಿ ಅತಿವೇಗವಾಗಿ ಬಸ್ ಚಲಾಯಿಸಿದ್ದಾನೆ. ಪರಿಣಾಮ ಬಸ್ ಹಿಂಬದಿಯಲ್ಲಿ ಬುಲೆಟ್ ಸಿಲುಕಿ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಬೈಕಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಅಪಘಾತದಲ್ಲಿ ಅನುಜಾ (28), ಪರಶುರಾಮ (25), 6 ವರ್ಷದ ವಿವೇಕಾಳಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೀಪಾವಳಿ ಹಬ್ಬದ ನಿಮಿತ್ಯ ಅನುಜಾ ತವರೂರು ಕಲ್ಲೋಳ ಗ್ರಾಮಕ್ಕೆ ಮಕ್ಕಳೊಂದಿಗೆ ಬಂದಿದ್ದರು. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಘಾರಗುಟಗಿ ಗ್ರಾಮಕ್ಕೆ ತೆರಳುವಾಗ ಈ ಅಪಘಾತ ನಡೆದಿದೆ. ಈ ಬಗ್ಗೆ ಚಿಕ್ಕೋಡಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.