ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ. ಪ್ರಕರಣವನ್ನು ವಾಲ್ಮೀಕಿ ನಿಗಮದಲ್ಲಿ (Valmiki Development Corporation) ಕೋಟಿ ಕೋಟಿ ಹಗರಣ ಪ್ರಕರಣದಲ್ಲಿ ಸಿಬಿಐ ಎಂಟ್ರಿ ಕೊಡುವ ಸಾಧ್ಯತೆ ಬೆನ್ನಲ್ಲೇ ಸಚಿವ ನಾಗೇಂದ್ರ (Minister Nagendra) ತಲೆದಂಡದ ಬಗ್ಗೆ ಚರ್ಚೆ ಆಗಿದೆ.
ಸಿಬಿಐ ಎಂಟ್ರಿಯಾದ್ರೆ ರಾಜ್ಯ ಸರ್ಕಾರಕ್ಕೂ ಸಂಕಷ್ಟ ತಪ್ಪಿದ್ದಲ್ಲ ಎಂಬ ಕಾರಣಕ್ಕೆ ನಿನ್ನೆ ರಾತ್ರಿ ಮತ್ತು ಇಂದು ತುರ್ತು ಸಭೆ ನಡೆಸಿದ ಸಿಎಂ-ಡಿಸಿಎಂ, ಪ್ರಕರಣವನ್ನು ಎಸ್‍ಐಟಿಗೆ ವಹಿಸಿದ್ದಾರೆ. ಅಲ್ಲದೇ ಅಗತ್ಯಬಿದ್ರೆ ರಾಜೀನಾಮೆ ನೀಡಲು ರೆಡಿಯಗಿರುವಂತೆ ಸಚಿವ ನಾಗೇಂದ್ರಗೆ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ತಡರಾತ್ರಿಯೊಳಗೆ ಸಿಐಡಿ ಪ್ರಾಥಮಿಕ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಈ ವರದಿ ಅನ್ವಯ ಸಿಎಂ ಸಿದ್ದರಾಮಯ್ಯ ಅಗತ್ಯ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಯಾರೇ ತಪ್ಪು ಮಾಡಿದ್ರೂ ಕ್ರಮ ಆಗುತ್ತೆ. ಪರಿಶೀಲನೆ ಮಾಡ್ತಿದ್ದೇವೆ ಎಂದು ಡಿಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಹಗರಣ – ಅಕ್ರಮದ ತನಿಖೆಗೆ ಇಳಿಯುತ್ತಾ ಸಿಬಿಐ?
ಮತ್ತೊಂದೆಡೆ ನಾಗೇಂದ್ರ ತಲೆದಂಡಕ್ಕೆ ಒತ್ತಡ ಹೇರೋದನ್ನು ಬಿಜೆಪಿ ನಾಯಕರು ಮುಂದುವರಿಸಿದ್ದಾರೆ. ಮೃತರ ಮನೆಗೆ ಅಶೋಕ್, ಈಶ್ವರಪ್ಪ ಪ್ರತ್ಯೇಕವಾಗಿ ತೆರಳಿ ಸಾಂತ್ವನ ಹೇಳಿದ್ರು. ಎಸ್‍ಐಟಿ ಬೇಡ, ಸಿಬಿಐಗೆ ವಹಿಸಿ ಎಂದು ಆಗ್ರಹಿಸಿದ್ರು. ಈ ಮಧ್ಯೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಸಂಬಂಧ ಸಿಬಿಐಗೆ ಯೂನಿಯನ್ ಬ್ಯಾಂಕ್ ದೂರು ನೀಡಿದೆ. ಪ್ರಶ್ನಾರ್ಹ ವಹಿವಾಟುಗಳನ್ನು `ವಂಚನೆ’ ಎಂದು ಘೋಷಿಸಿರುವ ಬ್ಯಾಂಕ್, 3 ಶಾಖೆಯ ಅಧಿಕಾರಿಗಳನ್ನು ಅಮಾನತು ಮಾಡಿದೆ. ಈ ಹಗರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡೋದಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆ ಹೊರಡಿಸಿದೆ.