ಪ್ರತಿಯೊಂದು ಆರಂಭಕ್ಕೂ ಒಂದು ಅಂತ್ಯವಿರಲೇಬೇಕು. ಅದರಂತೆ 2025ಕ್ಕೆ ವಿದಾಯ ಹೇಳಿ 2026ಅನ್ನು ಪ್ರೀತಿಯಿಂದ ಬರಮಾಡಿಕೊಳ್ಳುವ ಘಳಿಗೆಯಿದು.
ಪ್ರತಿದಿನ ಹೊಸತನ್ನು ಬಯಸುವ ನಾವುಗಳು.. 365 ದಿನಗಳ ಸಮ್ಮಿಲನವಾಗಿರುವ ಹೊಸ ವರ್ಷಕ್ಕೆ ಬಹುದೊಡ್ಡ ಆಸೆಯನ್ನೇ ಇಟ್ಟುಕೊಂಡಿರುತ್ತೇವೆ. ಆದರೆ ಇದೊಂದು ಕಡೆಯಾದರೆ ಇನ್ನೊಂದೆಡೆ ಬದಲಾಗುವ ಕ್ಯಾಲೆಂಡರ್ ಗಳ ಮಧ್ಯೆ ನಾವೆಲ್ಲ ಬದಲಾಗದೆ ಉಳಿದುಬಿಡುತ್ತೇವೆ.
ಮನುಷ್ಯ ಭಾವನಾತ್ಮಕವಾಗಿ ಬಂಧ ಬೆಸೆಯುವ ಜೀವಿ. ವಸ್ತುವಾದರೂ ಅಷ್ಟೇ, ವ್ಯಕ್ತಿಯಾದರೂ ಅಷ್ಟೇ, ಪ್ರಾಣಿಯಾದರೂ ಅಷ್ಟೇ. ಕೆಲ ಸಮಯದ ಬಳಿಕ ಅದರೊಂದಿಗೆ ಈಬೆರೆತುಬಿಡುತ್ತೇವೆ. ಸಾಮಾನ್ಯವಾಗಿ ಚಿಕ್ಕವರಿದ್ದಾಗ ನಾವುಗಳೆಲ್ಲ ಒಂದು ವಸ್ತುವಿನ ಜೊತೆಗೆ ತುಂಬಾ ಕಡಿಮೆ ಸಮಯದಲ್ಲಿಯೇ ಹೊಂದಿಕೊಂಡು ಬಿಡುತ್ತೇವೆ. ಉದಾಹರಣೆಗೆ ಒಂದು ಗೊಂಬೆಯಾದರೆ ಆ ಗೊಂಬೆಗೆ ಜೀವ ಕೊಟ್ಟು ನಮ್ಮದೇ ಮನೆಯ ಭಾಗವೆಂಬಂತೆ ನೋಡಿಕೊಳ್ಳುತ್ತೇವೆ. ಒಂದು ವೇಳೆ ಅದಕ್ಕೆ ಏನಾದರೂ ಆದರೆ ತುಂಬಾ ಸಂಕಟಪಟ್ಟುಕೊಳ್ಳುತ್ತೇವೆ. ಆ ಸಮಯದಲ್ಲಿ ಏನೂ ಅರಿಯದವರೇ ನಾವು ಅಷ್ಟೊಂದು ಪರಿತಪಿಸಬೇಕಿದ್ದರೆ, ಇದೀಗ ವಸ್ತು ಹಾಗೂ ವ್ಯಕ್ತಿಗೆ ಎಷ್ಟು ಬೆಲೆ ಕೊಡಬೇಕು ಎಂದು ತಿಳಿಯುವಷ್ಟು ದೊಡ್ಡವರಾಗಿದ್ದೇವೆ. ಆದರೆ ಈಗ ನಮಗೆಲ್ಲ ವ್ಯಕ್ತಿಗಿಂತ ವಸ್ತುಗಳ ಮೇಲಿನ ಮೋಹವೇ ಜಾಸ್ತಿ.
ಪ್ರತಿ ಹೊಸ ವರ್ಷವೂ ನಮಗೆ ಹೊಸತನ್ನು ಕೊಡಲಿ, ಒಳ್ಳೆಯದನ್ನು ಕೊಡಲಿ ಎಂದು ನಾವು ಬಯಸುತ್ತೇವೆ. ಆದರೆ ಕಳೆದು ಹೋದ ದಿನಗಳು ನಮ್ಮ ಕಣ್ಣ ಮುಂದೆ ಒಂದೊಳ್ಳೆಯ ನೆನಪುಗಳನ್ನು ಬಿಟ್ಟು ಹೋಗುತ್ತದೆ. ಇರುವ ನಾಳೆಗಳಿಗಿಂತ ಇದ್ದ ನೆನಪುಗಳೇ ಖುಷಿ ನೀಡುತ್ತವೆ. ವರ್ಷಗಳ ಮೇಲಿನ ಮುಖಕ್ಕಿಂತ ಆ ಕ್ಷಣದ ಮೇಲಿನ ಮೋಹ ಹೆಚ್ಚಿರಲಿ. ಇರುವ ಈ ಕ್ಷಣ ಆ ಕ್ಷಣಕ್ಕೆ ಮಾತ್ರ ಶಾಶ್ವತ.. ಇದರ ಹೊರತಾಗಿ ಬೇರೆ ಎಲ್ಲವೂ ಆ ಕ್ಷಣಕ್ಕೆ ಮಾತ್ರ ಸೀಮಿತ. ಪ್ರತಿದಿನ, ಪ್ರತಿಕ್ಷಣವನ್ನು ಆನಂದಿಸಿ, ಜೀವಿಸಿ.
ಬದಲಾವಣೆ ಜಗದ ನಿಯಮ. ಪ್ರತಿ ವಸ್ತು, ಪ್ರತಿಯೊಂದು ಅಂಶ, ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯು ಬದಲಾವಣೆಗೆ ಸೀಮಿತವಾಗಿದೆ. ಎಲ್ಲವೂ ಬದಲಾಗುತ್ತಿರುತ್ತದೆ. ನಿಮ್ಮಲ್ಲಿ ಬದಲಾವಣೆ ಅನ್ನೋದು ನಿಮ್ಮಿಂದಲೇ ಶುರುವಾಗಬೇಕು. ಹೊರತಾಗಿ ಬೇರೆ ಯಾವುದರಿಂದಲೂ ಅದು ಅಸಾಧ್ಯ. ವರ್ಷಗಳು ಕಳೆದಂತೆ ಅಂಕಿಗಳು ಮಾತ್ರ ಬದಲಾಗುತ್ತದೆ. ಇದರ ಮಧ್ಯ ನಾವೆಲ್ಲ ಮುನ್ನಡೆಯುವ ಸಮಯದಂತಾಗೋಣ. ನಡೆಯುತ್ತಾ ಸಾಗೋಣ.
ಇದು 2025ಕ್ಕೇ ವಿದಾಯ ಹೇಳೋ ಸಮಯ.




