– ನಮ್ಮ ಸಂವಿಧಾನವನ್ನು ಆರ್‌ಎಸ್‌ಎಸ್, ಸಾವರ್ಕರ್ ವಿರೋಧಿಸಿದ್ದರು
ಬೆಂಗಳೂರು: ನಮ್ಮ ಸಂವಿಧಾನವನ್ನು ಸಾವರ್ಕರ್, RSS ವಿರೋಧ ಮಾಡಿತ್ತು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಆರೋಪ ಮಾಡಿದರು.
ಸಂವಿಧಾನ ದಿನದ ಅಂಗವಾಗಿ ವಸಂತನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಸಿಎಂ, ಈ ವೇಳೆ ಪ್ರಧಾನಿ ಮೋದಿ ವಿರುದ್ಧವೂ ಕಿಡಿಕಾರಿದರು. ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ-ಮನುಷ್ಯ ತಾರತಮ್ಯ ಸೃಷ್ಟಿಯಾಗಿದೆ. ಸಂವಿಧಾನ ವಿರೋಧಿಗಳು ಮತ್ತು ಮನುಸ್ಮೃತಿ ಬಗ್ಗೆ ಎಚ್ಚರವಹಿಸಬೇಕು ಎಂದರು. ಇದನ್ನೂ ಓದಿ: ಜೆಡಿಎಸ್‌ನ ಯಾವ ಶಾಸಕರೂ ಕಾಂಗ್ರೆಸ್ ಸೇರಲ್ಲ: ಬಿಎನ್ ರವಿಕುಮಾರ್
ಎಷ್ಟೇ ಒಳ್ಳೆ ಸಂವಿಧಾನ ನಮ್ಮದಾಗಿದ್ದರೂ ಅದು ಕೆಟ್ಟವರ ಕೈಗೆ ಹೋದರೆ ಪರಿಣಾಮವೂ ಕೆಟ್ಟದಾಗಿರುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಪಾಲಿಸುವವರ ಕೈಯಲ್ಲಿ ಈ ಸಂವಿಧಾನ ಇದ್ದಾಗ ಮಾತ್ರ ಸಾರ್ಥಕತೆ ಬರುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು. ಆದ್ದರಿಂದ ಈ ಸಂವಿಧಾನದ ಮೌಲ್ಯಗಳನ್ನು ವಿರೋಧಿಸುವವರ ಕೈಗೆ ಅಧಿಕಾರ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.
ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ. ಈ ಎಚ್ಚರಿಕೆ ನಮಗೆ ಇರಬೇಕು. ಸಂವಿಧಾನ ಜಾರಿಗೆ ಹಿಂದೂ ಮಹಾಸಭಾದ ಸಾವರ್ಕರ್, ಗೋಳ್ವಾಳ್ಕರ್ ಕೂಡ ವಿರೋಧಿಸಿದ್ದರು. ಬಿಜೆಪಿಯ ಮಾತೃ ಪಕ್ಷ RSS ಕೂಡ ನಮ್ಮ ಸಂವಿಧಾನ ಜಾರಿಯನ್ನು ವಿರೋಧಿಸಿದ್ದರು. ಬಾಬಾ ಸಾಹೇಬರ ಸಂವಿಧಾನ ಜಾರಿಗೂ ಮೊದಲು ಮನುಷ್ಯ-ಮನುಷ್ಯರನ್ನು ತಾರತಮ್ಯದಿಂದ ಶೋಷಿಸುವ, ಅಸಮಾನತೆಯನ್ನು ಆಚರಿಸುವ ಅನಾಗರಿಕ ವ್ಯವಸ್ಥೆ ಮತ್ತು ಶೂದ್ರರು-ದಲಿತರು-ಮಹಿಳೆಯರಿಗೆ ಶಿಕ್ಷಣವನ್ನು ವಿರೋಧಿಸುವ ಅಲಿಖಿತವಾದ ಮನುಸ್ಮೃತಿಯ ಪದ್ಧತಿಗಳು ಭಾರತದಲ್ಲಿ ಜಾರಿಯಲ್ಲಿತ್ತು. ಸಂವಿಧಾನ ವಿರೋಧಿಗಳು ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಹಿಂದೂಗಳ ಸುರಕ್ಷತೆ ಖಚಿತಪಡಿಸಿ: ಚಿನ್ಮಯ್ ಕೃಷ್ಣ ದಾಸ್ ಬಂಧಿಸಿದ್ದಕ್ಕೆ ಬಾಂಗ್ಲಾಗೆ ಭಾರತ ತರಾಟೆ
ಈ ಚರಿತ್ರೆ, ಇತಿಹಾಸವನ್ನು ನಾವು ಮರೆಯಬಾರದು. ನಮಗೆ ಬಂದಿರುವ ಸ್ವಾತಂತ್ರ್ಯ ಸಫಲ ಆಗಬೇಕಾದರೆ ಎಲ್ಲರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸಾಧ್ಯ ಎಂದು ಅಂಬೇಡ್ಕರ್ ಅವರು ಹೇಳಿದ್ದರು. ಮೋದಿ ಮಂತ್ರಿ ಮಂಡಲದಲ್ಲಿ ಮಂತ್ರಿ ಆಗಿದ್ದ ಅನಂತ ಕುಮಾರ ಹೆಗ್ಡೆ ಅವರು, ‘ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು’ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡರು. ಆದರೆ ಮೋದಿಯವರಾಗಲಿ, ಬಿಜೆಪಿಯವರಾಗಲಿ ಇದನ್ನು ವಿರೋಧಿಸಲಿಲ್ಲ. ಅವರನ್ನು ಮಂತ್ರಿ ಸ್ಥಾನದಿಂದ ಇಳಿಸಲಿಲ್ಲ. ಆದ್ದರಿಂದ ಅನಂತ ಕುಮಾರ ಹೆಗ್ಡೆ ಅವರ ಮಾತಿಗೆ ಅವರೆಲ್ಲರ ಸಮ್ಮತಿ ಇತ್ತು ಅಂತಲೇ ಅರ್ಥ. ಇದನ್ನು ದೇಶದ ಜನತೆ ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂವಿಧಾನದ ಧ್ಯೇಯೋದ್ದೇಶಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಸರ್ಕಾರ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ ಸಂವಿಧಾನದ ಪ್ರಕಾರವೇ ನಡೆದುಕೊಳ್ಳಬೇಕು. ನಮ್ಮ ಸರ್ಕಾರ ಕೂಡ ಸಂವಿಧಾನದ ಆಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಹತ್ತು ಹಲವು ಭಾಗ್ಯಗಳನ್ನು ಜಾರಿ ಮಾಡಿದೆವು. ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ನೀಡುವ ಕಾರ್ಯಕ್ರಮಗಳನ್ನು ನಾವು ರೂಪಿಸಿ, ಜಾರಿ ಮಾಡಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಡಿಸಿಎಂ ಶಿವಕುಮಾರ್, ಸಚಿವ ಮಹದೇವಪ್ಪ ಸೇರಿ ಹಲವರು ಉಪಸ್ಥಿತಿ ಇದ್ದರು.