ನವದೆಹಲಿ: ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹಗರಣದ (Mahadev App Betting Scam) ಮಾಸ್ಟರ್ ಮೈಂಡ್ ಸೌರಭ್ ಚಂದ್ರಕರ್‌ನನ್ನು ದುಬೈನಲ್ಲಿ (Dubai) ಬಂಧಿಸಲಾಗಿದೆ. ಇಡಿ (ED) ಮನವಿಯ ಮೇರೆಗೆ ಇಂಟರ್‌ಪೋಲ್ ಹೊರಡಿಸಿದ ರೆಡ್ ಕಾರ್ನರ್ ನೋಟಿಸ್ ಬಳಿಕ ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಕಿಂಗ್‌ಪಿನ್‌ನ್ನು ಬಂಧಿಸಲಾಗಿದೆ.
ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟದ ವೆಬ್‌ಸೈಟ್‌ಗಳಿಗೆ ಸಂಬಂಧಿಸಿದ ಈ ಹಗರಣವು ಸಾರ್ವಜನಿಕರಿಗೆ 5,000 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿದೆ ಎಂದು ಅಂದಾಜಿಸಲಾಗಿದೆ. ಭಾರತದಾದ್ಯಂತ ಪ್ಯಾನಲ್ ಆಪರೇಟರ್‌ಗಳ ಜಾಲದ ಮೂಲಕ ಈ ಆ್ಯಪ್ ಕಾರ್ಯನಿರ್ವಹಿಸುತ್ತಿದ್ದು, ಅಕ್ರಮ ಬೆಟ್ಟಿಂಗ್ ಚಟುವಟಿಕೆಗಳ ಹಣ ವರ್ಗಾವಣೆಯನ್ನು ಇದು ಸುಗಮಗೊಳಿಸುತ್ತದೆ. ಈ ಆ್ಯಪ್ ಕಂಪನಿಗೂ ಚಂದ್ರಕರ್‌ಗೂ ಸಂಪರ್ಕ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಚಂದ್ರಕರ್ ಬಂಧನವು ನಡೆಯುತ್ತಿರುವ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಅಧಿಕಾರಿಗಳು ಆತನನ್ನು ಭಾರತಕ್ಕೆ ಕರೆತರುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದ್ದು, ಒಂದು ವಾರದೊಳಗೆ ಭಾರತಕ್ಕೆ ಕರೆತರುವ ನಿರೀಕ್ಷೆ ಇದೆ. ಬಂಧನದ ಕುರಿತು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ಸಂಬಂಧ ಡಿಸೆಂಬರ್ 2023ರಲ್ಲಿ ರವಿ ಉಪ್ಪಲ್ ಎಂಬಾತನನ್ನು ದುಬೈನಲ್ಲಿ ಸ್ಥಳೀಯ ಅಧಿಕಾರಿಗಳು ಇಡಿ ಮನವಿಯ ಮೇರೆಗೆ ಇಂಟರ್‌ಪೋಲ್ ಹೊರಡಿಸಿದ ರೆಡ್ ಕಾರ್ನರ್ ನೋಟಿಸ್ (ಆರ್‌ಎನ್) ಮೇಲೆ ಬಂಧಿಸಿದ್ದರು. ಮಹಾದೇವ್ ಆನ್‌ಲೈನ್ ಬುಕ್ಕಿಂಗ್ ಆ್ಯಪ್ ಯುಎಇಯನಿಂದ ಕಾರ್ಯನಿರ್ವಹಿಸುತ್ತಿದೆ ಇಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಮಹದೇವ್ ಆ್ಯಪ್ ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಆ್ಯಪ್ ಕಾರ್ಯಾಚರಣೆಗಳ ಕುರಿತು ತನಿಖೆ ನಡೆಯುತ್ತಿದೆ.
ಏನಿದು ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್?
ರೆಡ್ ಕಾರ್ನರ್ ನೋಟಿಸ್ ಎನ್ನುವುದು ಹಸ್ತಾಂತರ, ಶರಣಾಗತಿ ಅಥವಾ ಅಂತಹದ್ದೇ ಕಾನೂನು ಕ್ರಮಕ್ಕೆ ಬಾಕಿ ಇರುವ ವ್ಯಕ್ತಿಯನ್ನು ಪತ್ತೆಹಚ್ಚಲು ಮತ್ತು ತಾತ್ಕಾಲಿಕವಾಗಿ ಬಂಧಿಸುವುದಕ್ಕೆ ವಿಶ್ವಾದ್ಯಂತ ಕಾನೂನು ಜಾರಿಗೊಳಿಸಲು ಮಾಡುವ ವಿನಂತಿಯಾಗಿದೆ. ಇದು ಕೋರುವ ದೇಶದಲ್ಲಿ ನ್ಯಾಯಾಂಗ ಅಧಿಕಾರಿಗಳು ನೀಡಿದ ಬಂಧನದ ವಾರಂಟ್ ಅಥವಾ ನ್ಯಾಯಾಲಯದ ಆದೇಶವನ್ನು ಇದಕ್ಕಾಗಿ ಒದಗಿಸಬೇಕು. ಆದಾಗ್ಯೂ, ಆ ವ್ಯಕ್ತಿಯನ್ನು ಬಂಧಿಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವಾಗ ಸದಸ್ಯ ರಾಷ್ಟ್ರಗಳು ತಮ್ಮದೇ ಆದ ಕಾನೂನುಗಳ ಪ್ರಕಾರ ನಡೆದುಕೊಳ್ಳುತ್ತವೆ. ರೆಡ್ ನೋಟಿಸ್ ಎಂಬುದು ಬೇಕಾಗಿರುವ ವ್ಯಕ್ತಿಗೆ (ವಾಂಟೆಡ್) ನೀಡುವ ಅಂತಾರಾಷ್ಟ್ರೀಯ ಎಚ್ಚರಿಕೆ ಮಾತ್ರ, ಇದು ಬಂಧನದ ವಾರಂಟ್ ಅಲ್ಲ. ಆದ್ದರಿಂದ ಅಗತ್ಯವಿರುವ ವ್ಯಕ್ತಿಯನ್ನು ಗುರುತಿಸಲು ಮಾಹಿತಿ, ಅವರ ಹೆಸರು, ಹುಟ್ಟಿದ ದಿನಾಂಕ, ರಾಷ್ಟ್ರೀಯತೆ, ಕೂದಲು ಮತ್ತು ಕಣ್ಣಿನ ಬಣ್ಣ, ಛಾಯಾಚಿತ್ರಗಳು ಮತ್ತು ಬೆರಳಚ್ಚುಗಳು ಲಭ್ಯವಿದ್ದರೆ ಅವುಗಳನ್ನು ಒದಗಿಸುತ್ತಾರೆ