ರಿಯಾದ್: ಪತಿ ನನ್ನನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕೆ ವಿವಾಹ ವಿಚ್ಛೇದನ ಪಡೆಯುವುದನ್ನು ನೋಡಿದ್ದೇವೆ. ಆದರೆ ಸೌದಿ ಅರೇಬಿಯಾದ ಮಹಿಳೆಯೊಬ್ಬರು ತಾಯಿಗಿಂತಲೂ ನನ್ನನ್ನು ಹೆಚ್ಚು ಪ್ರೀತಿಸಿದ್ದಕ್ಕೆ ಪತಿಗೆ ವಿಚ್ಛೇದನ ನೀಡಿದ್ದಾರೆ.
ಹೌದು, ಕೋರ್ಟ್ ನಲ್ಲಿ ನ್ಯಾಯಾಧೀಶರು ವಿಚ್ಛೇದನ ಪಡೆಯಲು ಕಾರಣ ಕೇಳಿದ ಸಂದರ್ಭದಲ್ಲಿ ಮಹಿಳೆ, ತನ್ನ ಪತ್ನಿಗಾಗಿ ಎಲ್ಲವನ್ನೂ ಮಾಡುವ ಮನುಷ್ಯನನ್ನು ನಾನು ಎಂದಿಗೂ ನಂಬುವುದಿಲ್ಲ. ಏಕೆಂದರೆ ತನ್ನ ಸ್ವಂತ ತಾಯಿಗಾಗಿ ಸಣ್ಣ ಸಹಾಯವನ್ನು ಮಾಡುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ತನ್ನ ಸ್ವಂತ ತಾಯಿಗೆ ಉತ್ತಮ ಮಗನಾಗಿರದೇ ಇದ್ದಲ್ಲಿ ಆತನನ್ನು ನಂಬಲು ಸಾಧ್ಯವಿಲ್ಲ. ಆತ ಭವಿಷ್ಯದಲ್ಲಿ ತನಗೂ ಇದೇ ಸ್ಥಿತಿ ಉಂಟುಮಾಡಬಹುದು ಎಂದು ತಿಳಿಸಿರುವುದಾಗಿ ಸೌದಿ ಮಾಧ್ಯಮ ವರದಿ ಮಾಡಿದೆ.
ತನ್ನ ತಾಯಿಯನ್ನು ಕೈಬಿಟ್ಟ ರೀತಿಯಲ್ಲಿ ತನ್ನನ್ನು ಭವಿಷ್ಯದಲ್ಲಿ ಬಿಟ್ಟು ಬಿಡುವ ದಿನಕ್ಕಾಗಿ ನಾನು ಕಾಯಲು ಸಿದ್ಧವಿಲ್ಲ ಎಂದು ತಿಳಿಸಿದ್ದಾರೆ. ವಿಚಾರಣೆ ವೇಳೆ ಪತಿ, ನಿನಗಾಗಿ ನನ್ನ ಕುಟುಂಬವನ್ನು ತ್ಯಜಿಸಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪತ್ನಿ, ಈ ಕಾರಣಕ್ಕೆ ನಾನು ನಿನಗೆ ವಿಚ್ಛೇದನ ನೀಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಪತ್ನಿ ಮಾತು ಕೇಳಿ ಶಾಕ್ ಒಳಗಾದ ಪತಿ ತನ್ನ ಪತ್ನಿಗೆ ವಿಚ್ಛೇದನ ನೀಡಲು ನಿರಾಕರಿಸಿದ್ದು, ಆಕೆಗಾಗಿ ಏನು ಬೇಕಾದರು ಮಾಡಲು ಸಿದ್ಧ ಎಂದು ಮನವಿ ಸಲ್ಲಿಸಿದ್ದಾರೆ. ಆದರೆ ಮಹಿಳೆ ಪತಿಯ ಮನವಿಯನ್ನು ತಿರಸ್ಕರಿಸಿದ್ದಾರೆ.
ಪತಿ ತಾನು ಬಯಸಿದ ವಿದೇಶಿ ಪ್ರವಾಸ ಸೇರಿದಂತೆ, ಎಲ್ಲವನ್ನೂ ಖರೀದಿಸಲು ಹಣ ಖರ್ಚು ಮಾಡಿದ್ದು, ತನ್ನನ್ನು ಸಂತೋಷದಿಂದ ನೋಡಿಕೊಂಡಿದ್ದಾರೆ. ಆದರೆ ನನ್ನ ವಿಚ್ಛೇದನ ನಿರ್ಧಾರ ಮಾತ್ರ ಬದಲಾಗುವುದಿಲ್ಲ ಎಂದು ಪತ್ನಿ ಹೇಳಿದ್ದಾರೆ.
ಮಾಧ್ಯಮ ವರದಿಯ ಪ್ರಕಾರ ಮಹಿಳೆಯೂ ಪತಿ ನೀಡಿದ ವರದಕ್ಷಿಣೆಯನ್ನು ಹಿಂದಿರುಗಿಸಿದ್ದು, ಮಹಿಳೆ ವಾದ ಕೇಳಿದ ನ್ಯಾಯಾಧೀಶರು ವಿಚ್ಛೇದನವಕ್ಕೆ ಒಪ್ಪಿಗೆ ನೀಡಿದ್ದಾರೆ.