– ಭಾರತದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಇಳಿಕೆಯಾಗುತ್ತಾ?
ರಿಯಾದ್: ಅಮೆರಿಕ-ಇರಾನ್ ಯುದ್ಧದ (US Iran War) ತೀವ್ರತೆ ಕಡಿಮೆಯಾಗಿ ಹಾರ್ಮುಜ್ ಜಲಸಂಧಿ ಸಂಚಾರಕ್ಕೆ ಮುಕ್ತವಾದ ನಂತರ ಕಚ್ಚಾತೈಲ ಪೂರೈಕೆಗೆ ತೀವ್ರ ಪೈಪೋಟಿ ಎದುರಾಗಿದೆ. ತೈಲ ದೈದ್ಯ ಸೌದಿ ಅರೇಬಿಯಾ ಕೂಡ ಇದರ ಪೈಪೋಟಿಗೆ ಬಿದ್ದಿದೆ. ಬೇಡಿಕೆ ದುರ್ಬಲಗೊಳ್ಳುವುದು ಮತ್ತು ಉದ್ವಿಗ್ನತೆ ಕಡಿಮೆಯಾಗುತ್ತಿರುವುದರಿಂದ ಸೌದಿ ಆಗಸ್ಟ್‌ನಿಂದ ಜಾರಿಗೆ ಬರುವಂತೆ, ಏಷ್ಯಾದ ಗ್ರಾಹಕರಿಗೆ ತನ್ನ ಪ್ರಮುಖ ಕಚ್ಚಾ ತೈಲದ ಬೆಲೆಯನ್ನ ಭಾರೀ ಪ್ರಮಾಣದಲ್ಲಿ (Crude Oil Price Cut) ಕಡಿತಗೊಳಿಸಿದೆ.
ಹೌದು. ಸೌದಿ ಅರೇಬಿಯಾ (Saudi Arabia) ಆಗಸ್ಟ್‌ನಿಂದ ಜಾರಿಗೆ ಬರುವಂತೆ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 11 ಡಾಲರ್ ನಷ್ಟು ಕಡಿತಗೊಳಿಸಿದೆ. 26 ವರ್ಷಗಳಲ್ಲಿ ಇದು ಅತಿದೊಡ್ಡ ಕಡಿತವಾಗಿದೆ.

ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಕಡಿಮೆಯಾದ ನಂತರ, ಏಷ್ಯಾದಲ್ಲಿ (Asia) ಬೇಡಿಕೆ ಕಡಿಮೆಯಾಗುವುದರೊಂದಿಗೆ ಪೂರೈಕೆ ಪರಿಸ್ಥಿತಿಗಳು ಸುಧಾರಿಸುತ್ತಿವೆ. ಇದು ವಿಶ್ವದ ಅತಿದೊಡ್ಡ ಕಚ್ಚಾ ತೈಲ ರಫ್ತುದಾರ ರಾಷ್ಟ್ರವಾದ ಸೌದಿ ಅರೇಬಿಯಾ ಮೇಲೆ, ಬೆಲೆ ಕಡಿಮೆ ಮಾಡುವ ಒತ್ತಡ ಹೆಚ್ಚಿಸಿದೆ.
ಬ್ಲೂಮ್‌ಬರ್ಗ್ ಉಲ್ಲೇಖಿಸಿದ ಬೆಲೆ ದಾಖಲೆಯ ಪ್ರಕಾರ, ಸರ್ಕಾರಿ ಸ್ವಾಮ್ಯದ ಸೌದಿ ಅರಾಮ್ಕೊ, ಏಷ್ಯಾದ ಖರೀದಿದಾರರಿಗೆ ತನ್ನ ಪ್ರಮುಖ ಅರಬ್ ಲೈಟ್ ಕಚ್ಚಾ ತೈಲದ ಅಧಿಕೃತ ಮಾರಾಟ ಬೆಲೆಯನ್ನು, ಆಗಸ್ಟ್ ವಿತರಣೆಗಳಿಗೆ ಬ್ಯಾರೆಲ್‌ಗೆ 11 ಡಾಲರ್‌ನಷ್ಟು ಕಡಿಮೆ ಮಾಡಿ, ಪ್ರಾದೇಶಿಕ ಮಾನದಂಡಕ್ಕೆ 1.50 ಡಾಲರ್ ರಿಯಾಯಿತಿಯನ್ನು ನಿಗದಿಪಡಿಸಿದೆ. ಇದಕ್ಕೂ ಮುನ್ನ ಜುಲೈನಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲಕ್ಕೆ 6 ಡಾಲರ್‌ನಷ್ಟು ಬೆಲೆ ಕಡಿತ ಮಾಡಿತ್ತು. ಸದ್ಯ71.7 ಡಾಲರ್ ಬೆಲೆ ಪ್ರತಿ ಬ್ಯಾರಲ್ ಕಚ್ಚಾತೈಲ ಮಾರಾಟ ಮಾಡುತ್ತಿದ್ದು, ಹೊಸ ದರ ಆಗಸ್ಟ್‌ನಿಂದ ಅನ್ವಯವಾಗಲಿದೆ.

ಹಾರ್ಮುಜ್ ಓಪನ್ ಬೆನ್ನಲ್ಲೇ ತೈಲ ಬೆಲೆ ಇಳಿಕೆ
ಇತ್ತೀಚಿನ ಇಸ್ರೇಲ್-ಇರಾನ್ ಸಂಘರ್ಷದ ಸಮಯದಲ್ಲಿ ಕಂಡುಬಂದ ಗರಿಷ್ಠ ಮಟ್ಟದಿಂದ, ಕಚ್ಚಾ ತೈಲ ಮಾರುಕಟ್ಟೆಗಳು ತೀವ್ರವಾಗಿ ಹಿಮ್ಮೆಟ್ಟಿವೆ. ಯುದ್ಧ ಸ್ಥಗಿತಗೊಂಡ ನಂತರ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆ ಪುನರಾರಂಭವಾದ ನಂತರ ಬೆಲೆಗಳಲ್ಲಿ ಇಳಿಕೆ ಕಂಡುಬಂದಿದೆ. ಪೂರೈಕೆ ಅಡಚಣೆಗಳ ಬಗ್ಗೆ ಕಳವಳಗಳು ಕಡಿಮೆಯಾಗಿದ್ದರಿಂದ, ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ಸುಮಾರು 72 ಡಾಲರ್‌ಗೆ ಇಳಿಕೆಯಾಗಿದೆ. ಇರಾನ್ ತೈಲದ ಮೇಲಿನ ನಿರ್ಬಂಧ ತೆರವುಗೊಂಡಿದ್ದರೂ, ಭಾರತವು ಇರಾನ್ ಕಚ್ಚಾತೈಲ ಖರೀದಿಗೆ ವಿಳಂಬ ಮಾಡಲಿದೆ.
ಭಾರತಕ್ಕೆ ಏನು ಲಾಭ?
ಸೌದಿ ಅರೇಬಿಯಾ ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸುವ ಅತಿದೊಡ್ಡ ದೇಶಗಳಲ್ಲಿ ಒಂದಾಗಿದ್ದು, ಸಾಮಾನ್ಯವಾಗಿ ದೇಶದ ಒಟ್ಟು ಆಮದಿನಲ್ಲಿ ಇದರ ಪಾಲು ಶೇ. 10 ರಿಂದ ಶೇ. 15 ರಷ್ಟಿರುತ್ತದೆ. 2023ರಲ್ಲಿ OPEC+ ಕಚ್ಚಾತೈಲ ಉತ್ಪಾದನೆ ಕಡಿಮೆ ಮಾಡುವ ಘೋಷಣೆ ಮಾಡಿತ್ತು. ಆ ಸಂದರ್ಭದಲ್ಲೂ ಸೌದಿ ಅರೇಬಿಯಾದಿಂದ ಭಾರತವು ಕಚ್ಚಾತೈಲ ಆಮದನ್ನು ಮುಂದುವರೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಕಚ್ಚಾತೈಲ ಬೆಲೆ 11 ಡಾಲರ್‌ನಷ್ಟು ಕಡಿತ ಮಾಡಿರುವುದರಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯು ಕಡಿಮೆಯಾಗಲಿದೆಯೇ ಅನ್ನೋದನ್ನು ಕಾದುನೋಡಬೇಕಿದೆ.
