ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಕಾಂಗ್ರೆಸ್ ಪಕ್ಷ ತೊರೆಯುವ ಕುರಿತು ಮಾತನಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿಲ್ಲ. ಪಕ್ಷೇತರನಾಗಿ ರಿಕ್ಷಾ ಚಿಹ್ನೆಯಲ್ಲಿ ಗೆದ್ದಿದ್ದೇನೆ. ರಾಜಕೀಯ ಮಾಡುವಷ್ಟು ದಿನ ಮಾಡಬೇಕು. ಉಳಿದ ಸಮಯದಲ್ಲಿ ಬೇರೆಯವರನ್ನು ಮುಂದೆ ತರಬೇಕು. ನಮ್ಮ ತೀರ್ಮಾನವನ್ನು ಜನರ ಮುಂದೆ ಹೇಳಬೇಕು. ಆ ಬಳಿಕವೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸಾಗರಮಾಲಾ ಯೋಜನೆ ವಿರೋಧಿ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದ ಅವರು, ನಾನು ಕಾರವಾರದ ಸಲುವಾಗಿ ಸಮಸ್ತ ಜೀವವನ್ನು ಮುಡಿಪಾಗಿಟ್ಟಿದ್ದೇನೆ. ಪಕ್ಷ ತೊರೆಯುವ ಕುರಿತು ನಾನು ನನ್ನ ನಿರ್ಣಯ ನಾನು ತೆಗೆದುಕೊಳ್ಳುತ್ತೇನೆ. ಪಕ್ಷದಲ್ಲಿ ಇರಲಿ ಹೊರಗಿರಲಿ ನನ್ನ ಕೆಲಸ ಮಾಡುತ್ತೇನೆ. ನಾನು ಪಕ್ಷದಲ್ಲೇ ಇರಬೇಕು ಎಂದೇನೂ ಇಲ್ಲ ಎಂದರು. ಇದನ್ನು ಓದಿ: ಸಾಗರಮಾಲಾ ಯೋಜನೆಗೆ ಮೀನುಗಾರರ ವಿರೋಧ – ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಸಗಣಿ, ಚಪ್ಪಲಿ
ಸದ್ಯ ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಮುಂದಿನ ನನ್ನ ಅಭಿಪ್ರಾಯವನ್ನು ಜನರ ಮುಂದೆ ಹೇಳಬೇಕು. ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಆದರೆ ಮಾಧ್ಯಮಗಳಲ್ಲಿ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ವರದಿಯಾಗಿದೆ. ನಾನು ಯಾವುದೇ ಕಾರಣಕ್ಕೂ ರಾಜಕೀಯದಿಂದ ದೂರ ಸರಿಯುವುದಿಲ್ಲ. ಗಡಿ ಜಿಲ್ಲೆಯಾಗಿರುವ ಕಾರಣ ಇಲ್ಲಿ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಕಾರವಾರಕ್ಕೆ ಆಸ್ಪತ್ರೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೆ. ಮೆಡಿಕಲ್ ಕಾಲೇಜು ತರುವುದಕ್ಕೂ ಪ್ರಯತ್ನ ಮಾಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ನಾನು ರಾಜಕೀಯದಲ್ಲಿ ಇಲ್ಲಿದ್ದರೂ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತೇನೆ ಎಂದರು.