– ಗೋಕಾಕ್ ಉಪಚುನಾವಣೆ ಸುಳಿವು ಬಿಚ್ಚಿಟ್ಟ ಸಚಿವರು
ಬೆಳಗಾವಿ: ಗೋಕಾಕ್ ವಿಧಾನಸಭಾ ಕ್ಷೇತ್ರದ ಜನರು ಯಾರಿಗೆ ಬೆಂಬಲ ನೀಡುತ್ತಾರೆ ಅಂತ ನೋಡೋಣ ಎಂದು ಹೇಳುವ ಮೂಲಕ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು, ಸಹೋದರ, ಅತೃಪ್ತ ಕಾಂಗ್ರೆಸ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಚಿವರು, ಗೋಕಾಕ್ ರಾಜಕೀಯದಲ್ಲಿ ಇಲ್ಲಿಯವರೆಗೂ ನಾವು ಭಾಗವಹಿಸಿಲ್ಲ. ರಮೇಶ್ ಜಾರಕಿಹೊಳಿ ಅವರೇ ಎಲ್ಲವನ್ನೂ ನೋಡಿ ಹೋಗುತ್ತಿದ್ದರು. ಈಗ ಅವರು ನಮ್ಮ ಜೊತೆಗಿಲ್ಲ. ಹೀಗಾಗಿ ಕ್ಷೇತ್ರವನ್ನು ನಮ್ಮ ಹಿಡಿತದಲ್ಲಿ ತೆಗೆದುಕೊಳ್ಳಲು ಪ್ರತಿ ಹಳ್ಳಿ, ಗ್ರಾಮಕ್ಕೂ ಹೋಗಿ ಪ್ರಚಾರ ಮಾಡುತ್ತಿದ್ದೇವೆ ಎಂದರು.
Advertisement
Advertisement
ಬಿಜೆಪಿಯನ್ನು ಬೆಂಬಲಿಸುವಂತೆ ತಮ್ಮ ಬೆಂಬಲಿಗರಿಗೆ ರಮೇಶ್ ಜಾರಕಿಹೊಳಿ ಅವರು ಹೇಳಿದ್ದು ನಿಜ. ಈ ಕುರಿತು ಕೆಲ ಕಾರ್ಯಕರ್ತರು ನಮ್ಮ ಬಳಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲೆಯ ಬೇರೆ ಬೇರೆ ಗ್ರಾಮಗಳಿಗೆ ಹೋಗಿ ಬಿಜೆಪಿಗೆ ಬೆಂಬಲ ನೀಡುವಂತೆ ಮಾಜಿ ಸಚಿವರು ಸೂಚನೆ ನೀಡಿದ್ದಾರೆ. ಹೀಗೆ ಆಗುತ್ತದೆ ಎಂದು ನಮಗೆ ಮೊದಲೇ ತಿಳಿದಿತ್ತು. ಇದರಿಂದಾಗಿ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ನೇತೃತ್ವದಲ್ಲಿ ಪ್ರಚಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.
Advertisement
ಪಕ್ಷವು ರಮೇಶ್ ಜಾರಕಿಹೊಳಿ ಅವರ ವಿರುದ್ಧ ಕ್ರಮಕೈಗೊಂಡರೂ ಅಷ್ಟೇ, ಬಿಟ್ಟರು ಅಷ್ಟೇ. ಅವರನ್ನು ಈಗಾಗಲೇ ಪಕ್ಷದಿಂದ ದೂರ ಇಡಲಾಗಿದೆ. ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಅವರನ್ನು ಕಣಕ್ಕೆ ಇಳಿಸಲಾಗುತ್ತದೆ. ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸುವುದೇ ನಮ್ಮ ಮುಂದಿನ ಟಾರ್ಗೆಟ್ ಎಂದರು.
Advertisement
ಪಕ್ಷಕ್ಕೆ ರಮೇಶ್ ಜಾರಕಿಹೊಳಿ ಬರುತ್ತಾರೋ ಇಲ್ಲವೋ ಎಂದು ಬಿಜೆಪಿಯವರು ಗೊಂದಲಕ್ಕೆ ಸಿಲುಕಿದ್ದಾರೆ. ಹೀಗಾಗಿ ಮಾಜಿ ಸಚಿವರು ತಮ್ಮ ನಿರ್ಧಾರವನ್ನು ಬೇಗ ಕೈಗೊಳ್ಳುವುದು ಉತ್ತಮ. ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋದರೆ ಕೆಲವು ಬೆಂಬಲಿಗರು ಅವರ ಜೊತೆಗೆ ಹೋಗುತ್ತಾರೆ. ಬಿಜೆಪಿಯ ಕೆಲವರು ರಮೇಶ್ ಜಾರಕಿಹೊಳಿ ಆಗಮನದಿಂದ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.