– 3 ಶಾಸಕರು ರಾಜೀನಾಮೆ ಕೊಟ್ರೆ ಸರ್ಕಾರ ಬೀಳಲ್ಲ
ಬೆಂಗಳೂರು: ಮಾಜಿ ಸಚಿವ, ಸಹೋದರ ರಮೇಶ್ ಜಾರಕಿಹೊಳಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ಯಾವುದೇ ಸಮಸ್ಯೆ ಅಗುವುದಿಲ್ಲ. ಇದನ್ನು ಅವರು ಆರ್ಥೈಸಿಕೊಳ್ಳಬೇಕಿದೆ ಎಂದು ಅರಣ್ಯ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ನಮ್ಮನ್ನು ಸುಖಾ ಸುಮ್ಮನೆ ಸದ್ದು ಮಾಡುತ್ತಿದ್ದಾರೆ ಅಷ್ಟೇ. ಆದರೆ ನಾವು ಪಕ್ಷದ, ಸರ್ಕಾರ ಜವಾಬ್ದಾರಿಯನ್ನ ಮಾತ್ರ ನಿರ್ವಹಿಸುತ್ತಿದ್ದೇವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಕಳೆದ 1 ವರ್ಷದ ಅವಧಿಯಿಂದ ರಾಜೀನಾಮೆ ನೀಡುತ್ತೇನೆ ಎಂದು ರಮೇಶ್ ಅವರು ಹೇಳುತ್ತಿದ್ದಾರೆ. ಆದರೆ ಅವರು ಬಿಜೆಪಿಯೊಂದಿಗೆ ಸೇರಿ ಮಾಡುತ್ತಿರುವ ಈ ಕಾರ್ಯ ಯಶಸ್ವಿ ಆಗುವುದಿಲ್ಲ. ನಾವು ಎಂದು ಕೂಡ ಅವರಿಗೆ ಪಕ್ಷದ ಸಭೆಗಳಿಗೆ ಗೈರಾಗುವಂತೆ ಹೇಳಲಿಲ್ಲ. ಗಣ್ಯರು ಜಿಲ್ಲೆಗೆ ಆಗಮಿಸಿದರೆ ಸ್ವಾಗತ ಮಾಡಬೇಡಿ ಎಂದು ಹೇಳಿಲ್ಲ. ಆದ್ದರಿಂದ ಸ್ವಯಂಕೃತ ತಪ್ಪುಗಳೇ ಅವರ ಈ ನಡೆಗೆ ಕಾರಣವಾಗಿದೆ. ಐದು ಬಾರಿ ಶಾಸಕರಾಗಿರುವ ಅವರಿಗೆ ಇವುಗಳನ್ನು ವಿಚಾರ ಮಾಡುವ ಶಕ್ತಿ ಇದೆ. ಆದರೆ ರಮೇಶ್ ಜಾರಕಿಹೊಳಿ ಅವರು ಏಕಾಂಗಿಯಾಗಿದ್ದು, ಅವರ ಬಳಿ ಸಾಕಷ್ಟು ಸಂಖ್ಯಾಬಲ ಇಲ್ಲ. ಆದ್ದರಿಂದ ಅವರು ತಟಸ್ಥರಿದ್ದಾರೆ ಎಂದು ಹೇಳಿದರು.
ಡಿಕೆಶಿ ಪರ ಬ್ಯಾಟಿಂಗ್: ಇದೇ ವೇಳೆ ಸಚಿವ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಿರಿತನದ ಆಧಾರದಲ್ಲಿ ಅವರಿಗೆ ಉಸ್ತುವಾರಿಯನ್ನು ನೀಡಲಾಗಿದೆ. ಉಸ್ತುವಾರಿ ಕೊಟ್ಟಿರುವುದರ ಬಗ್ಗೆ ನಮಗೆ ಯಾವುದೇ ಅಸಮಾಧಾನ ಇಲ್ಲ. ಹಿರಿಯರಾದ ಕಾರಣ ಅವರಿಗೆ ಈ ಹಿಂದೆಯೂ ಹಲವು ಜವಾಬ್ದಾರಿಯನ್ನ ನೀಡಲಾಗಿತ್ತು. ಯಶಸ್ವಿಯಾಗಿ ಅದನ್ನು ನಿರ್ವಹಿಸಿದ್ದಾರೆ. ಚಿಂಚೋಳಿ, ಕುಂದಗೋಳ ಉಪಚುನಾವಣೆಯಲ್ಲೂ ನಾವೇ ಗೆಲುವು ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.