ಬೆಳಗಾವಿ: ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ. ಬದಲಿಗೆ ರಮೇಶ್ ಜಾರಕಿಹೊಳಿ ವಿರುದ್ಧ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಮ್ಮನ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಗೋಕಾಕ್‍ನಲ್ಲಿ ಬೆಂಬಲಿಗರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಹಾಗೂ ಬೆಂಬಲಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮೇಶ್ ಜಾರಕಿಹೊಳಿ ಕೈ ಕೆಳಗಿನ ಬೆಂಬಲಿಗರು ಬೀಟ್ ಪೊಲೀಸರಿದ್ದ ಹಾಗೆ, ಬೀಟ್ ಪೊಲೀಸರು ಪಿಎಸ್‍ಐ ನನ್ನು ಭೇಟಿಯಾಗಲು ಬಿಡುವುದಿಲ್ಲ. ಹಾಗೇ ಇವರೂ ಸಹ ಜನರು ಶಾಸಕರನ್ನು ಭೇಟಿಯಾಗಲು ಬಿಡುವುದಿಲ್ಲ. ಯಾವುದೇ ಪಕ್ಷದ ಶಾಸಕರಾದವರು ಎಲ್ಲ ಜನರಿಗೆ ಸಿಗುವಂತಿರಬೇಕು. ಆದರೆ ಇವರು ಐದು ಊರುಗಳಲ್ಲಷ್ಟೇ ಜಾಸ್ತಿ ಇದ್ದಾರೆ, ಉಳಿದ ಊರುಗಳಲ್ಲಿ ಅವರನ್ನು ಮುಗಿಸಿದ್ದೇವೆ. ಸರ್ಕಾರ ಬಿಳಿಸುವ ಶಕ್ತಿ ರಮೇಶ್ ಜಾರಕಿಹೊಳಿ ಬಳಿ ಇದೆ. ಆದರೆ ಗ್ರಾಮಗಳಿಗೆ ಒಂದು ಬಸ್ ಬಿಡಿಸುವ ಶಕ್ತಿ ಅವರ ಬಳಿ ಇಲ್ಲ ಎಂದು ಹರಿಹಾಯ್ದರು.
Advertisement
Advertisement
ಕ್ಷೇತ್ರದಲ್ಲಿ ಎಷ್ಟೋ ಊರುಗಳಿಗೆ ಬಸ್ ಸಂಪರ್ಕ ಇಲ್ಲ, ಕುಡಿಯಲು ನೀರು ಇಲ್ಲ. ಯಾವುದೇ ವ್ಯಾಪಾರವಿಲ್ಲ, ಸಮಾಜಸೇವೆ ಇಲ್ಲ ಆದರೂ ಇವರು ಅಷ್ಟು ಬ್ಯುಸಿ ಇರುತ್ತಾರೆ. ರಮೇಶ್ ಜಾರಕಿಹೊಳಿ ಒಂದೇ ಒಂದು ಕೆಡಿಪಿ ಸಭೆ ಮಾಡಿಲ್ಲ. ಲೂಟಿ ಮಾಡುವ ಗ್ಯಾಂಗ್ ಇಟ್ಟುಕೊಂಡಿದ್ದಾರೆ. ಅರ್ಧಪಾಲು ಇಲ್ಲಿ, ಅರ್ಧಪಾಲು ಅವರಿಗೆ ಎಂಬ ಪದ್ಧತಿ ಇದೆ. ಮುಸ್ಲಿಮರಿಗೆ ಒಂದು ಶಾದಿಮಹಲ್ ಕಟ್ಟಲಿಕ್ಕೆ ಆಗಿಲ್ಲ. ರಮೇಶ್ ಜಾರಕಿಹೊಳಿ ಹಿಂದಿನ ಚುನಾವಣೆಯಲ್ಲಿ ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ಮಾಡಿದ್ದರು. ಅವರೂ ರಮೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ ಎನ್ನುತ್ತಿದ್ದಾರೆ. ಯಾರ ಅಭಿವೃದ್ಧಿ ಎನ್ನುವುದು ತಿಳಿಯುತ್ತಿಲ್ಲ ಎಂದು ಟಾಂಗ್ ನೀಡಿದರು.
Advertisement
ರಮೇಶ ಜಾರಕಿಹೊಳಿ ಸೋಲಿಸುವುದೇ ನಮ್ಮ ಗುರಿ. ಅವರು ಗೆದ್ದರೆ ಮೂರು ಲಾಭ ಆಗುತ್ತೆ ಎಂದು ಪ್ರಚಾರ ಮಾಡಲಾಗುತ್ತಿದೆ. ಜಲಸಂಪನ್ಮೂಲ ಸಚಿವ, ಡಿಸಿಎಂ, ಉಸ್ತುವಾರಿ ಸಚಿವರು ಆಗುತ್ತಾರೆ ಎಂದು ಅಂತಾ ಪ್ರಚಾರ ಮಾಡುತ್ತಿದ್ದಾರೆ. ಉಸ್ತುವಾರಿ ಸಚಿವರಾದರೆ ಯಾರಿಗೆ ಲಾಭ, ಮತ್ತೆ ಅವರಿಗೇ ಲಾಭ. ಈ ಹಿಂದೆ ಎರಡು ಬಾರಿ ಸಚಿವರಾಗಿದ್ದರಲ್ಲ ಏನು ಅಭಿವೃದ್ಧಿ ಮಾಡಿದ್ದಾರೆ? ಜನ ಬದಲಾವಣೆಗೆ ಕಾಯುತ್ತಿದ್ದಾರೆ ಎಂದು ಹರಿಹಾಯ್ದರು.
Advertisement
ರಮೇಶ್ ಜಾರಕಿಹೊಳಿ ಮನೆ ಮುಂದಿನ ರಸ್ತೆ ಮಾಡಲು ಐದು ವರ್ಷ ಬೇಕಾಯಿತು. ಇನ್ನೂ ಅವರ ಮನೆಯ ಮುಂದಿನ ರಸ್ತೆ ಕಾಮಗಾರಿಯೇ ಮುಗಿದಿಲ್ಲ. ಬಿಎಸ್‍ವೈ ಬಿಟ್ಟರೆ ರಮೇಶ್ ಜಾರಕಿಹೊಳಿಗೆ ಬೇರೆ ಆಯ್ಕೆ ಇಲ್ಲ. ಬಿಎಸ್‍ವೈ ಹೆಸರಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಜನ ಹೊರಗೆ ಬರಬೇಕಾದಲ್ಲಿ ಲಖನ್ ಜಾರಕಿಹೊಳಿಯೇ ಬೇಕಾಗಿಯಿತು.
ಲಖನ್ ಶಕ್ತಿ, ಪಕ್ಷದ ಶಕ್ತಿ, ನಮ್ಮ ಶಕ್ತಿ ಎಲ್ಲವೂ ಇದೆ. ಡಿಸೆಂಬರ್ 9ರ ವರೆಗೆ ನಾವು ಕಾಯುವ ಅವಶ್ಯಕತೆಯಿಲ್ಲ. ನಮ್ಮ ಪಟಾಕಿ ಡಿ.5ನೇ ತಾರೀಖು ಸಂಜೆಯೇ ಹಾರಲಿವೆ. ಗೆಲುವಿಗಾಗಿ 9ನೇ ತಾರೀಖಿನ ವರೆಗೆ ನಾವು ಕಾಯುವ ಅವಶ್ಯಕತೆಯಿಲ್ಲ. ನಮ್ಮ ಗೆಲುವಿನ ಪಟಾಕಿ 5ನೇ ತಾರೀಖಿನಂದೆ ಹಾರಲಿವೆ. ಸರ್ಕಾರ ಕೆಡವಿದವರನ್ನು ನಾವು ಕೆಡವಬೇಕಾಗಿದೆ, ಆಗ ನಮಗೆ ಒಂದು ಶಕ್ತಿ ಬರುತ್ತದೆ. ರಾಜಕೀಯ ಇತಿಹಾಸ ಬರೆಯುವ ಸುವರ್ಣ ದಿನ ನಮ್ಮ ಮುಂದಿದೆ. ಗೆಲುವಿಗೆ ಶ್ರಮಿಸೋಣ ಎಂದು ಬೆಂಬಲಿಗರಿಗೆ ಕರೆ ನೀಡಿದರು.