ಹಾವೇರಿ: ಇನ್ನೂ ಎಷ್ಟು ದಿನ ಇರ್ತೀವೋ ಗೊತ್ತಿಲ್ಲ. ನನ್ನ ಆಡಳಿತ ತೃಪ್ತಿ ಇದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿಗೆ ನಾನೇ ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ದೆ. ನಾನೇ ಉದ್ಘಾಟನೆ ಮಾಡ್ತಿದ್ದೀನಿ. ಮೆಡಿಕಲ್ ಕಾಲೇಜಿಗೆ ಸುಮಾರು 500 ಕೋಟಿ ಖರ್ಚು ಮಾಡಿದ್ದೀವಿ ಎಂದು ತಿಳಿಸಿದರು. ಇದನ್ನೂ ಓದಿ: ರೆಕಾರ್ಡ್ ಮಾಡಿ ಸಿದ್ದರಾಮಯ್ಯ ನಾಟೌಟ್ – ವಾಟ್ ನೆಕ್ಸ್ಟ್?
ಅರಸು ದಾಖಲೆ ಮುರಿದ ವಿಚಾರವಾಗಿ ಮಾತನಾಡಿ, ಜನರ ಆಶೀರ್ವಾದದಿಂದ ಇಲ್ಲಿವರೆಗೂ ಬಂದಿದ್ದೀನಿ. ಇನ್ನೂ ಎಷ್ಟು ದಿನ ಇರ್ತೀವೋ ಗೊತ್ತಿಲ್ಲ. ನನ್ನ ಆಡಳಿತ ತೃಪ್ತಿಯಿದೆ. ಬಿಜೆಪಿಯವರು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ಎಸ್‌ಸಿಪಿ ಟಿಎಸ್‌ಪಿ ಮಾಡಿದವರು ಯರ‍್ರೀ? ಬಿಜೆಪಿಯವರು ಏನು ಮಾಡಿಲ್ಲ ಅಂತ ಹೇಳಿದ್ರೆ? ನಾನೇನು ಮಾಡಿದ್ದೀನಿ ಅಂತ ಜನರನ್ನ ಕೇಳಬೇಕು. ಅನ್ನಭಾಗ್ಯ ಕೊಟ್ಟವರು ಯಾರು? ಕೃಷಿ ಭಾಗ್ಯ ಮಾಡಿದವರು ಯಾರು? ರೈತರಿಗೆ ಮನಸ್ವಿನಿ ಮಾಡಿದವರು, ಶಕ್ತಿ ಯೋಜನೆ ಮಾಡಿದವರು ಯಾರು? ಗೃಹಲಕ್ಷ್ಮಿ, ಗೃಹಜ್ಯೋತಿ ಮಾಡಿದವರು ಯಾರು? ಮುನ್ನೂರು ಕೋಟಿ ಮೆಡಿಕಲ್ ಕಾಲೇಜಿಗೆ ಕೊಟ್ಟಿದ್ದೀವಿ. ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು ಅವರು. ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಪ್ರತಿ ವರ್ಷ 3 ಲಕ್ಷ ಮನೆ ಕಟ್ತೀವಿ ಅಂತ ಹೇಳಿದ್ದೆವು. 14,52,000 ಮನೆ ಕಟ್ಟಿದ್ದೀವಿ. 5 ವರ್ಷ ಇದ್ರಲ್ಲಾ ಎಷ್ಟು ಮನೆ ಕಟ್ಟಿಸಿದ್ದಾರೆ? ಕುಡಿಯೋ ನೀರು ಕೊಟ್ಟವರು ಯಾರು? ಅವರಿಗೆ ಸುಳ್ಳು ಹೇಳೋದೆ ಕೆಲಸ. ಕೇಂದ್ರದಿಂದ ಬರೋ ಹಣ ಬಂದಿಲ್ಲ. ಜಿಎಸ್‌ಟಿ ತಂದವರು ಯಾರು? ಎಷ್ಟು ವರ್ಷ ಇತ್ತು ಅದು? ಜನರನ್ನ ಸುಲಿಗೆ ಮಾಡಿ ಈಗ ಜಿಎಸ್‌ಟಿ ಕಡಿಮೆ ಮಾಡಿದ್ದೀವಿ ಅಂತಾರೆ. ರಾಜ್ಯಕ್ಕೆ 10 ರಿಂದ 12 ಸಾವಿರ ಕೋಟಿ ನಷ್ಟ ಆಗ್ತಿದೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.
ನಮಗೆ ಎಷ್ಟು ಕೊಡ್ತಿದಾರೆ? 60-70 ಸಾವಿರ ಕೋಟಿ ಅಷ್ಟೇ ವಾಪಾಸ್ ಬರುತ್ತೆ. ಒಂದು ರೂಪಾಯಿ ತೆರಿಗೆ ಕೊಟ್ಟರೆ 14 ರಿಂದ 15 ಪೈಸೆ ಕೊಡ್ತಾರೆ. ಇದಕ್ಕೆಲ್ಲಾ ಏನು ಹೇಳ್ತಾರೆ. ಅಪ್ಪರ್ ಭದ್ರಾಕ್ಕೆ ಅನುದಾನ ಕೊಟ್ಟರಾ? ಇವರ ಅವಧಿಯಲ್ಲಿ ಮೆಡಿಕಲ್ ಕಾಲೇಜು ಕಂಪ್ಲೀಟ್ ಮಾಡಲಿಲ್ಲ, ಯಾಕೆ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೇವರಾಜ ಅರಸು ಅವರಿಗೆ ಸಿದ್ದರಾಮಯ್ಯ ಸಾಟಿ ಇಲ್ಲ, ಯಾವ ಅಹಿಂದ ನಾಯಕ ರೀ..: ಹೆಚ್.ವಿಶ್ವನಾಥ್ ತಿರುಗೇಟು
ಬಳ್ಳಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಡಿಕೆಶಿ ನೋಡಿಕೊಂಡು ಬಂದಿದ್ದಾರೆ. ಬ್ಯಾನರ್ ಬಿಚ್ಚಿ ಹಾಕಿದವರು ಯಾರು? ಬಳ್ಳಾರಿಯಲ್ಲಿ ಗಲಾಟೆ ಆಗಲು ಪ್ರಚೋದನೆ ಮಾಡಿದವರು ಯಾರು? ಅಸೂಹೆ ತಡೆದುಕೊಳ್ಳೋಕೆ ಆಗಲ್ಲ ಅವರಿಗೆ ಎಂದು ಕುಟುಕಿದರು.
ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಬಗ್ಗೆ ಮಾತನಾಡಿ, ಆ ಯಮ್ಮನೇ ವಿವಸ್ತ್ರ ಆಗಿ ಮಹಿಳಾ ಪೊಲೀಸರಿಗೆ ಕಚ್ಚಿದ್ದಾರೆ. ವೆರಿ ಬ್ಯಾಡ್. ಪೊಲೀಸರು ಅರೆಸ್ಟ್ ಮಾಡಲು ಹೋದಾಗ ಅವರನ್ನೇ ಕಚ್ಚಿದ್ದಾರೆ. ಆ ವೇಳೆ 10 ಮಹಿಳಾ ಪೊಲೀಸರು ಇದ್ದರು. ಕಾನೂನು ಕೈಗೆ ತಗೊಬಾರದು, ತಗೊಂಡ್ರೆ ಕಾನೂನು ಪ್ರಕಾರ ಕ್ರಮ ಎಂದು ತಿಳಿಸಿದರು.
ಪೂರ್ಣಾವಧಿ ಅಧಿಕಾರ ಪೂರೈಸ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದರು.

