ಬೆಂಗಳೂರು: ಕರ್ನಾಟಕದಲ್ಲಿ ಡಬ್ಬಿಂಗ್ ಪರ-ವಿರೋಧ ಹೋರಾಟ ಮತ್ತೆ ತೀವ್ರಗೊಂಡಿದ್ದು, ತಮಿಳಿನ ನಟ ಅಜಿತ್ ಅಭಿನಯದ `ಸತ್ಯದೇವ್ ಐಪಿಎಸ್’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ ಮಂಗಳೂರು, ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ಇಂದು ರಿಲೀಸ್ ಆಗಬೇಕಿದ್ದ ಈ ಸಿನೆಮಾ ಸ್ಯಾಂಡಲ್‍ವುಡ್ ಮಂದಿಯ ಡಬ್ಬಿಂಗ್ ವಿರೋಧಕ್ಕೆ ಕೇವಲ ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ, ಮಂಗಳೂರು ಚಿತ್ರಮಂದಿರಗಳಲ್ಲಿ ಮಾತ್ರ ತೆರೆಕಾಣಲು ಸಿದ್ಧತೆಯಾಗಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ದಾವಣಗೆರೆ, ಚಿತ್ರದುರ್ಗದಲ್ಲಿ ಸಿನಿಮಾ ಪ್ರದರ್ಶನ ರದ್ದಾಗಿದೆ.
ಮಂಗಳೂರಿನ ಸುಚಿತ್ರ ಚಿತ್ರಮಂದಿರದಲ್ಲಿ ಚಿತ್ರ ನೋಡಲು ಪ್ರೇಕ್ಷಕರೇ ಇಲ್ಲದಂತಾಗಿದೆ. ಈ ಚಿತ್ರ ಮಂದಿರದಲ್ಲಿ 902 ಸೀಟ್‍ಗಳಿದ್ದು, ಅದರಲ್ಲಿ 16 ಮಂದಿ ಮಾತ್ರ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಒಟ್ಟಿನಲ್ಲಿ ಇದರಿಂದ ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಕ್ಕೆ ಪ್ರೇಕ್ಷಕರ ಬೆಂಬಲವೇ ಇಲ್ಲ ಎಂಬಂತಾಗಿದೆ.
ಹುಬ್ಬಳ್ಳಿಯಲ್ಲಿ ಯಾವುದೇ ಭಾಷೆಯ ಚಿತ್ರ ಬರಲಿ ಜನ ನೋಡ್ತಾರೆ. ಆದ್ರೆ ಸತ್ಯದೇವ್ ಡಬ್ಬಿಂಗ್ ಚಿತ್ರವನ್ನು ಮಾತ್ರ ಯಾರೂ ಕೂಡ ನೋಡಲು ಇಚ್ಚಿಸುತ್ತಿಲ್ಲ. ಕನ್ನಡ ಪರ ಸಂಘಟನೆ ಹಾಗೂ ಫಿಲ್ಮ್ ಛೇಂಬರ್ ಆಫ್ ಕಾಮರ್ಸ್ ಈ ಡಬ್ಬಿಂಗ್ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಚಿತ್ರದ ಪೋಸ್ಟರ್‍ಗಳನ್ನು ತೆಗೆದುಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ನಟ ಅಜಿತ್ ಅಭಿನಯದ ಸತ್ಯಜಿತ್ ಐಪಿಎಸ್ ಡಬ್ಬಿಂಗ್ ಸಿನಿಮಾ ಸುಮಾರು 60 ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ ಎಂದು ಡಬ್ಬಿಂಗ್ ವಾಣಿಜ್ಯ ಮಂಡಳಿ ಆಧ್ಯಕ್ಷರಾದ ಕೃಷ್ಣೆಗೌಡರು ಗುರುವಾರ ತಿಳಿಸಿದ್ದರು.