ಬೆಂಗಳೂರು: ಸಚಿವ ಸಾರಾ ಮಹೇಶ್ ಅವರು ಗುರುವಾರ ರಾತ್ರಿ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ದರು. ಇದೀಗ ಈ ಭೇಟಿಗೆ ಟ್ವಿಸ್ಟ್ ಸಿಕ್ಕಿದ್ದು, ಸಾರಾ ಮಹೇಶ್ ಭೇಟಿಯಾಗಿದ್ದ ಮುರಳೀಧರ್ ರಾವ್ ವಿರುದ್ಧ ಬಿಜೆಪಿ ಹೈಕಮಾಂಡ್ ಕೆಂಡಾಮಂಡಲವಾಗಿದೆ.
ನಿನ್ನೆ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್, ಸಚಿವ ಸಾರಾ ಮಹೇಶ್ ಅವರನ್ನು ಭೇಟಿಯಾಗಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಯಡಿಯೂರಪ್ಪ ಸೇರಿ ಎಲ್ಲರೂ ಮುರುಳೀಧರ್ ರಾವ್‍ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಸಮಯದಲ್ಲಿ ಸಚಿವ ಸಾರಾ ಮಹೇಶ್ ಭೇಟಿ ಅಗತ್ಯವಿತ್ತಾ? ರಾಜ್ಯದ ಜನತೆಗೆ ಯಾವ ಸಂದೇಶ ಹೋಗುತ್ತದೆ ಗೋತ್ತೇನ್ರೀ ಎಂದು ಬಿಎಸ್‍ವೈ ಅವರು ಮುರುಳೀಧರ್ ರಾವ್‍ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಬಿಜೆಪಿಗೆ ಬೆಂಬಲ ಕೊಡುತ್ತಾ ಜೆಡಿಎಸ್?: ಸಾರಾ ಮಹೇಶ್, ಕಮಲ ಮುಖಂಡರ ಭೇಟಿ!
ಡ್ಯಾಮೇಜ್ ಕಂಟ್ರೋಲ್ ಸಲುವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಅವರಿಗೆ ಕೂಡಲೇ ಬೆಂಗಳೂರು ಬಿಡುವಂತೆ ಹೈಕಮಾಂಡ್ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮುರುಳೀಧರ್ ರಾವ್ ಹೈದರಾಬಾದ್‍ಗೆ ಜೂಟ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಈಶ್ವರಪ್ಪಗೂ ಯಡಿಯೂರಪ್ಪ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮತ್ತು ಈಶ್ವರಪ್ಪ ಜೊತೆ ಸಾ.ರಾ ಮಹೇಶ್ ಗುರುವಾರ ರಾತ್ರಿ ಸಭೆ ನಡೆಸಿದ್ದರು. ಸಭೆ ಬಳಿಕ ಸಾರಾ ಮಹೇಶ್ ಅವರು ಕೆಕೆ ಗೆಸ್ಟ್ ಹೌಸ್ ಬಳಿ ಬಿಜೆಪಿ ನಾಯಕರ ಜೊತೆ ಮಾಧ್ಯಮಗಳಿಗೆ ಸೆರೆ ಸಿಕ್ಕಿದ್ದರು. ಈ ಮೂಲಕ ಮೂವರು ನಾಯಕರ ರಹಸ್ಯ ಭೇಟಿ ಬಯಲಾಗಿತ್ತು.