ರಾಯಚೂರು: ಒಂದು ದಿನ ಊಟ ಇಲ್ಲದಿದ್ದರೂ ಬದುಕಬಹುದು. ಆದರೆ ನೀರು ಇಲ್ಲದೆ ಇರಲು ಸಾಧ್ಯವೇ. ಹೀಗಾಗಿ ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಅಂತ ರಾಯಚೂರಿನ ಈ ಗ್ರಾಮದ ಜನ ನೀರಿಗಾಗೇ ತಮ್ಮ ಜೀವನವನ್ನ ಮುಡುಪಿಟ್ಟಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರು ಈ ಗ್ರಾಮವನ್ನ ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆ ಮಾಡಿಕೊಂಡು ಬಳಿಕ ಮರತೇ ಹೋಗಿದ್ದಾರೆ.
ಮರಳುಗಾಡಿನಲ್ಲಿ ಓಯಾಸಿಸ್ ಹುಡುಕುವಂತೆ ಇಲ್ಲಿ ಜನ ಹಳ್ಳದ ಮರಳಿನಲ್ಲಿ ಚಿಲುಮೆಯನ್ನ ಹುಡುಕಿ ನೀರು ಪಡೆಯುತ್ತಿದ್ದಾರೆ. ಚಿಲುಮೆ ನೀರನ್ನ ಸೋಸಿ ಕೊಡಕ್ಕೆ ತುಂಬಿ ತಲೆ ಮೇಲೆ ಹೊತ್ತುಕೊಂಡು ಪುನಃ ಒಂದು ಕಿ.ಮೀ ನಡೆದು ಮನೆಗೆ ನೀರು ತರುತ್ತಿದ್ದಾರೆ. ಇದು ರಾಯಚೂರಿನ ಸಂಸದರ ಆದರ್ಶಗ್ರಾಮ ಜಾಗೀರವೆಂಕಟಾಪುರ ಕೆಟ್ಟ ಪರಸ್ಥಿತಿ. ಹನಿ ನೀರಿಗೂ ಪರದಾಡುತ್ತಿರುವ ಜನರ ಗೋಳು ಕೇಳುವವರೇ ಇಲ್ಲದಂತಾಗಿದೆ.
Advertisement
Advertisement
ನೀರಿನ ಮೂಲವೇ ಇಲ್ಲದೆ ಗ್ರಾಮದ ಜನ ಹಳ್ಳದಿಂದ ನೀರು ತರುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿದ್ದಾರೆ. ಭೀಕರ ಬರಗಾಲ ಒಂದು ಕಡೆಯಾದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನ ಈ ಪರಸ್ಥಿತಿಗೆ ಕಾರಣವಾಗಿದೆ. ಇತ್ತ ತಲೆಹಾಕದ ಸಂಸದ ಬಿ.ವಿ.ನಾಯಕ್‍ರ ನಿರ್ಲಕ್ಷಕ್ಕೆ ಜನ ಕೆಂಡಾಮಂಡಲವಾಗಿದ್ದಾರೆ.
Advertisement
ಸಂಸದ ಬಿ.ವಿ.ನಾಯಕ್ ಮಾತ್ರ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ನಮ್ಮ ಪ್ರಸ್ತಾವನೆಗಳಿಗೆ ಹಣಕಾಸಿನ ನೆರವು ಸಿಕ್ಕಿಲ್ಲ ಹೀಗಾಗಿ ಅಭಿವೃದ್ದಿ ಮಾಡಲು ಸಾಧ್ಯವಾಗಿಲ್ಲ ಎಂದು ಸಂಸದ ಬಿ.ವಿ.ನಾಯಕ್ ಹೇಳುತ್ತಾರೆ. ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಸಂಸದರ ಆದರ್ಶ ಗ್ರಾಮ ಯೋಜನೆಗೆ ಯಾವುದೇ ವಿಶೇಷ ಅನುದಾನವಿಲ್ಲ ಅನ್ನೋದು ರಾಯಚೂರು ಸಂಸದರಿಗೆ ಯಾಕೆ ಗೊತ್ತಿಲ್ಲ ಅನ್ನೋದೆ ದೊಡ್ಡ ವಿಪರ್ಯಾಸ.
Advertisement
ಚಳಿಗಾಲದಲ್ಲೇ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಬೇಸಿಗೆಯಲ್ಲಿ ನಮ್ಮ ಪರಸ್ಥಿತಿ ಹೇಗೋ ಅಂತ ಗ್ರಾಮದ ಜನ ಆತಂಕದಲ್ಲಿದ್ದಾರೆ. ಟಾಸ್ಕ್ ಫೋರ್ಸ್ ರಚಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿರುವುದಾಗಿ ಅಧಿಕಾರಿಗಳು ಹೇಳುತ್ತಿರುವುದು ಕೇವಲ ಬಾಯಿ ಮಾತಿನಲ್ಲೇ ಉಳಿದಿದೆ. ಕನಿಷ್ಠ ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತು ಸಂಸದರ ಆದರ್ಶ ಗ್ರಾಮದ ಜನರ ಕಷ್ಟಕ್ಕೆ ಪರಿಹಾರ ಒದಗಿಸಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv