ಧಾರವಾಡ: ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಸೇವಿಸಿ ಅಕ್ಕ, ತಮ್ಮ ಇಬ್ಬರೂ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಇನ್ನೂ ಭಯಾನಕ ಮಾಹಿತಿಯೊಂದು ಹೊರ ಬಿದ್ದಿದೆ. ಅದೇ ಗ್ರಾಮದ ಇನ್ನೂ 15 ಜನ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಭಾನುವಾರವಷ್ಟೇ ಜಿಲ್ಲೆಯ ಗಂಬ್ಯಾಪೂರ ಗ್ರಾಮದಲ್ಲಿ ಸ್ಯಾನಿಟೈಸರ ಕುಡಿದು ಇಬ್ಬರು ಸಾವನ್ನಪ್ಪಿದ್ದರು. ಇದೀಗ ಗ್ರಾಮದ ಅಂದಾಜು 15 ಜನ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ. ಪರಿಶೀಲನೆಗಾಗಿ ಭಾನುವಾರ ರಾತ್ರಿ ಕಲಘಟಗಿ ಸಿಪಿಐ ವಿಜಯ ಬಿರಾದಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಹಿತಿ ಬಹಿರಂಗವಾಗಿದೆ. 13 ಜನರಲ್ಲಿ 4 ಜನರಿಗೆ ಗ್ರಾಮದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಘಟಗಿಯಿಂದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.
Advertisement
Advertisement
ಉಳಿದ 9 ಜನರಿಗೆ ಮತ್ತು ಗ್ರಾಮಕ್ಕೆ ಕಲಬೆರಕೆ ಮದ್ಯ ತಂದವರನ್ನು ಹುಡುಕಲು ತಂಡ ರಚನೆ ಮಾಡಲಾಗಿದೆ. ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಸ್ಯಾನಿಟೈಸರ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಾಗಿ ಸ್ಯಾನಿಟೈಸರ್‍ನಿಂದಾಗಿ ಗ್ರಾಮದಲ್ಲಿ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ.
Advertisement
ಭಾನುವಾರ ಇಬ್ಬರ ಸಾವು
ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದು ಒಂದೇ ದಿನ ಅಕ್ಕ- ತಮ್ಮ ಮೃತಪಟ್ಟಿದ್ದರು. ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ಕುರುವಿನಕೊಪ್ಪ(45) ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದರೆ, ಸಂಜೆ ಹೊತ್ತಿಗೆ ಮೃತನ ಸಹೋದರಿ ಜಂಬಕ್ಕ ಕಟ್ಟಿಮನಿ(47) ಸಹ ಮೃತಪಟ್ಟಿದ್ದರು. ಲಾಕ್‍ಡೌನ್ ಇದ್ದ ಕಾರಣ ಇವರಿಗೆ ಮದ್ಯ ಸಿಕ್ಕಿರಲಿಲ್ಲ. ಮದ್ಯ ವ್ಯಸನಿಗಳಾಗಿದ್ದ ಇವರು ಕಳೆದ ಒಂದು ತಿಂಗಳಿಂದ ಮದ್ಯ ಸೇವಿಸಿರಲಿಲ್ಲ. ಅಲ್ಲದೆ ಮೂರು ದಿನಗಳಿಂದ ಸ್ಯಾನಿಟೈಸರ್ ದಾಸರಾಗಿದ್ದರು.