ಕೊಟ್ಟವ ಕೋಡಂಗಿ ಇಸ್ಕೊಂಡವ ವೀರಭದ್ರ- ದ್ವಾರಕೀಶ್-ನಿರ್ಮಾಪಕರ ಜಗಳಕ್ಕೆ ಜಗ್ಗೇಶ್ ಎಂಟ್ರಿ

Public TV
3 Min Read
jaggesh 3

ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ದ್ವಾರಕೀಶ್ ಹಾಗೂ ನಿರ್ಮಾಪಕ, ಫೈನಾನ್ಶಿಯರ್ ರಮೇಶ್ ಜಗಳಕ್ಕೆ ನವರಸ ನಾಯಕ ಜಗ್ಗೇಶ್ ಎಂಟ್ರಿ ಕೊಟ್ಟಿದ್ದು, ಸರಣಿ ಟ್ವೀಟ್ ಮೂಲಕ ಪರೋಕ್ಷವಾಗಿ  ಅಸಮಾಧಾನ ಹೊರ ಹಾಕಿದ್ದಾರೆ.

ಪಬ್ಲಿಕ್ ಟಿವಿ ಸುದ್ದಿಯನ್ನು ರಿಟ್ವೀಟ್ ಮಾಡಿದ  ನಟ ಜಗ್ಗೇಶ್, ಪರೋಕ್ಷವಾಗಿ ನಟ, ನಿರ್ಮಾಪಕ ದ್ವಾರಕೀಶ್ ವಿರುದ್ಧ ಹರಿಹಾಯ್ದಿದ್ದಾರೆ. ‘ನನ್ನ 1 ಕೋಟಿ ರೂ. ಕೇಳಿದರೂ ಹೀಗೆ ಆಗಬಹುದು. ಕೊಟ್ಟವ ಸ್ನೇಹಿತ, ಬಳಸಿಕೊಂಡವರು ಸ್ನೇಹಿತರು, ಇದು ಹಣದ ವಿಷಯ ಮಾತನಾಡುವುದು ಕಷ್ಟ. ನನಗೆ ಬರಬೇಕಾದ 1 ಕೋಟಿ ರೂ. ಹಣಕ್ಕೆ ಬಾಯಿ ತೆಗೆದರೆ ನನ್ನ ವಿಷಯವು ಹೀಗೆ ಬರುವುದು. ಹಣ ಬೇಕಾದಾಗ ಪ್ರಾಮಾಣಿಕ ವ್ಯವಹಾರಸ್ಥರು. ವಾಪಸ್ ಕೊಡುವಾಗ ಮಾಧ್ಯಮ, ಪೊಲೀಸ್, ಮಾನಹಾನಿ ಎಂಥ ದೌರ್ಭಾಗ್ಯ ವ್ಯವಹಾರ. ಬರುವ ಹಣಕ್ಕಾಗಿ ನಾನು ತಾಳ್ಮೆಯಿಂದ ಕಾಯುತ್ತಿರುವ ಮೂರ್ಖ ಎಂದು ಜಗ್ಗೇಶ್ ಮೊದಲ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸಿನಿಮಾ, ಸಿನಿಮಾ, ಸಿನಿಮಾದಲ್ಲೇ ಸತ್ತಿದ್ದೇನೆ ನಾನು: ದ್ವಾರಕೀಶ್ ಕಣ್ಣೀರು

ಜಗ್ಗೇಶ್ ಎರಡನೇ ಟ್ವೀಟ್‍ನಲ್ಲಿ ಸಹ ದ್ವಾರಕೀಶ್ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ಕಿಡಿಕಾರಿದ್ದಾರೆ. ರಮೇಶ್ ಹಾಗೂ ಜಯಣ್ಣ ಗೌರವಸ್ಥ ವ್ಯವಹಾರಿಗಳು. ಕೊಟ್ಟವ ಕೋಡಂಗಿ, ಇಸ್ಕೊಂಡವ ವೀರಭದ್ರ, ಇದು ಗಾಂಧಿನಗರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾನೂ ಗಾಂಧಿನಗರದ ವ್ಯವಹಾರದಲ್ಲಿ ಭಾಗಿಯಾಗಿದ್ದೇನೆ. ಗಾಂಧಿನಗರದ ಬಿಲ್ಡಪ್ ರಾತ್ರಿ ನೆನೆದರೂ ನಿದ್ದೆ ಬರುವುದಿಲ್ಲ. ಮಾಧ್ಯಮದಲ್ಲಿ ಎಲ್ಲರೂ ಸ್ಟಾರ್‍ಗಳು, ನಿರ್ಮಾಪಕರು ಮಾತ್ರ ಫುಟ್‍ಪಾತ್. ಇದು ನಿಜ ಗಾಂಧಿನಗರ ದುನಿಯಾ, ನೇರನುಡಿ ನಿಷ್ಟೂರವಾದಿ ವ್ಯಾಖ್ಯಾನ ಎಂದು ಟೀಕಿಸಿದ್ದಾರೆ.

ಕೆಲ ಅಮಾಯಕರಿಗೆ ಸಮುದ್ರದ ಅಲೆ ಗೊತ್ತು. ನನಗೆ ಸಿನಿಮಾ ರಂಗದ ಅಲೆಗಳ ಆಳದಲ್ಲಿರುವ ಅಗೋಚರ ಕ್ರಿಮಿ ಕೀಟಗಳ ಬಗ್ಗೆ ಗೊತ್ತು. ಕಾರಣ ಆ ಮಾಯಾವಿ ಸಮುದ್ರದಲ್ಲಿ 38 ವರ್ಷಗಳ ವಾಸ ಎಂದು ತಮ್ಮ ಮೂರನೇ ಟ್ವೀಟ್‍ನಲ್ಲಿ ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.

ಹೀಗೆ ಸಾಲು ಟ್ವೀಟ್‍ಗಳ ಮೂಲಕ ಜಗ್ಗೇಶ್ ಅವರು ಪರೋಕ್ಷವಾಗಿ ದ್ವಾರಕೀಶ್ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ ತಮಗೂ ಒಂದು ಕೋಟಿ ರೂ. ಬರಬೇಕು. ನಾಜೂಕಾಗಿ ಮಾತನಾಡಿ ಇನ್ನೂ ಹಣ ನೀಡಿಲ್ಲ ಎಂಬರ್ಥದಲ್ಲಿ ಹರಿಹಾಯ್ದಿದ್ದಾರೆ. ಈ ಮೂಲಕ ನಿರ್ಮಾಪಕರ ಹಣಕಾಸು ವ್ಯವಹಾರದ ಕುರಿತು ಗಾಂಧಿನಗರದಲ್ಲಿ ವಾದ ವಿವಾದ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.

ಏನಿದು ಪ್ರಕರಣ?:
ದ್ವಾರಕೀಶ್ ಅವರ ಮನೆಗೆ ಫೈನಾನ್ಶಿಯರ್, ನಿರ್ಮಾಪಕ ರಮೇಶ್ ಅವರು ಫೆಬ್ರವರಿ 2ರಂದು ನುಗ್ಗಿ ದಾಂಧಲೆ ಮಾಡಿದ್ದಾರೆ. ದ್ವಾರಕೀಶ್ ಆಯುಷ್ಮಾನ್ ಭವ ಚಿತ್ರದ ನಿರ್ಮಾಪಕರಾಗಿದ್ದರು. ಈ ವೇಳೆ ಫೈನಾನ್ಶಿಯರ್ ರಮೇಶ್ ಅವರಿಂದ ಹಣ ಪಡೆದಿದ್ದರು. ಆದರೆ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಹಣ ಗಳಿಸುವಲ್ಲಿ ವಿಫಲ ಆಗಿತ್ತು. ಹೀಗಾಗಿ ಹಣ ವಾಪಸ್ ನೀಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ನಂತರ ಫೈನಾನ್ಸ್ ಮಾಡಿದ್ದ ರಮೇಶ್ ಹಣವನ್ನು ವಾಪಸ್ ಕೊಡುವಂತೆ ಪದೇ ಪದೇ ಕೇಳಿದ್ದಾರೆ. ದ್ವಾರಕೀಶ್ ನೀಡಿಲ್ಲ, ನಂತರ ಶುಕ್ರವಾರ ರಮೇಶ್ ಹಾಗೂ ನಿರ್ಮಾಪಕ ಜಯಣ್ಣ ಅವರು ದ್ವಾರಕೀಶ್ ಮನೆಗೆ ಹೋಗಿ ಹಣ ಕೇಳಿದ್ದರು. ಆಗ ದ್ವಾರಕೀಶ್ ಅವರು, ಕಷ್ಟದಲ್ಲಿದ್ದೇನೆ, ಸ್ವಲ್ಪ ಕಾಲಾವಕಾಶ ಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ಹಣವನ್ನು ಬಿಡುವುದಕ್ಕೆ ಸಾಧ್ಯವಿಲ್ಲ. ನೀವು ಹೇಳಿದ ಗಡುವು ಮುಗಿಯಿತು. ಗಡುವು ಮುಗಿದ ಬಳಿಕವೂ ಹಣವನ್ನು ಬಿಡುವುದಕ್ಕೆ ಆಗುವುದಿಲ್ಲ ಎಂದು ರಮೇಶ್ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು, ಗಲಾಟೆ ನಡೆದಿದೆ. ಇದರಿಂದ ಕೋಪಗೊಂಡ ದ್ವಾರಕೀಶ್, ಒಂದೂವರೆ ವರ್ಷ ಆದರೂ ನಿನಗೆ ನಾನು ಹಣ ಕೊಡೋದಿಲ್ಲ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿದೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *