ಬೆಂಗಳೂರು: ಸ್ಟಾರ್ ನಟರು ಮತ್ತು ನಿರ್ಮಾಪಕರ ಮನೆ ಮೇಲಿನ ಐಟಿ ದಾಳಿ ವೇಳೆ 109 ಕೋಟಿಯಷ್ಟು ಅಘೋಷಿತ ಆಸ್ತಿ ಪತ್ತೆಯಾಗಿದ್ದು, 2.85 ಕೋಟಿ ನಗದು ಸೇರಿದಂತೆ 11 ಕೋಟಿಯಷ್ಟು ಚಿನ್ನಾಭರಣ ಸೀಜ್ ಮಾಡಿದ್ದಾರೆ. ಈಗ ಈ ಐಟಿ ದಾಳಿಗೆ ಇಡಿ ಎಂಟ್ರಿಯಾದರೆ ನಟರಿಗೆ ಸಂಕಷ್ಟ ಗ್ಯಾರಂಟಿಯಾಗಿದೆ.
ಐಟಿ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ಸ್ಟಾರ್ ನಟರು ಮತ್ತು ನಿರ್ಮಾಪಕರು ಟ್ಯಾಕ್ಸ್ ಹೋಲ್ಡರ್ ಗಳಾದರೂ ತೆರಿಗೆ ವಂಚಿಸಿ ಆಸ್ತಿ ಮತ್ತು ಆದಾಯವನ್ನ ಮುಚ್ಚಿಟ್ಟಿರೋದನ್ನ ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಬ್ಯುಸಿನೆಸ್‍ನಲ್ಲಿ ಬಂದ ಆದಾಯ, ಥಿಯೇಟರ್ ಟಿಕೆಟ್ ನಲ್ಲಿ ವಂಚನೆ, ಆಡಿಯೊ ರೈಟ್ಸ್, ಡಿಜಿಟಲ್ ರೈಟ್ಸ್ ಮತ್ತು ಸ್ಯಾಟಲೈಟ್ ರೈಟ್ಸ್ ಗಳ ಅಕೌಂಟ್ಯಾಬಿಲಿಟಿ ಇಲ್ಲ ಅನ್ನೋದನ್ನ ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
Advertisement
Advertisement
ಈಗಾಗಲೇ ನೋಟಿಸ್ ಸಿದ್ಧ ಮಾಡಿಕೊಂಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ನಟರು ಮತ್ತು ನಿರ್ಮಾಪರಕರನ್ನ ವಿಚಾರಣೆಗೆ ಕರೆಯಲಿದೆ. ಇವತ್ತಿನಿಂದ ನಾಲ್ವರು ಸ್ಟಾರ್ ನಟರು ಮತ್ತು ನಿರ್ಮಾಪರಕು ಐಟಿ ಬಾಗಿಲು ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ. ಕೆಲವೊಂದಿಷ್ಟು ಪ್ರಶ್ನೋತ್ತರಗಳನ್ನ ರೆಡಿ ಮಾಡಿಟ್ಟುಕೊಂಡಿರುವ ಅಧಿಕಾರಿಗಳು ಪ್ರತಿಯೊಂದು ಪ್ರಶ್ನೆಗೂ ಉತ್ತರ ಪಡೆಯಲಿದ್ದಾರೆ. ಉತ್ತರ ಸಮಂಜಸವಾಗಿಲ್ಲದಿದ್ದರೆ, ದಾಖಲಾತಿಗಳನ್ನ ಹಾಜರು ಪಡಿಸಬೇಕಾಗುತ್ತದೆ. 109 ಕೋಟಿಯ ಆದಾಯದ ಮೂಲ ಯಾವುದು, ತೆರಿಗೆಯಿಂದ ಈ ಆಸ್ತಿಯನ್ನ ಮುಚ್ಚಿಟ್ಟಿದ್ದೇಕೆ, ಥಿಯೇಟರ್ ಟಿಕೆಟ್‍ನಿಂದ ಹಿಡಿದು ಸ್ಯಾಟಲೈಟ್ ರೈಟ್ಸ್‍ವರೆಗೂ ಲೆಕ್ಕಪತ್ರಗಳು ಯಾಕಿಲ್ಲ? ತೆರಿಗೆ ವಂಚನೆ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಿದ್ದೀರಿ ತಾನೆ? ಇದಕ್ಕಾಗಿ ಪೆನಾಲ್ಟಿ ಎಷ್ಟಿದೆ ಗೊತ್ತಾ.? ಹೀಗೆ ಪ್ರಶ್ನೆಗಳ ಸುರಿಮಳೆಗೈದು ನಟರು ಮತ್ತು ನಿರ್ಮಾಪಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ.
Advertisement
Advertisement
ಬರೀ ಐಟಿ ವಿಚಾರಣೆಯಾದರೆ ಪರವಾಗಿಲ್ಲ. ತೆರಿಗೆ ಕಟ್ಟದಿದ್ದರೆ ಶೇ.100 ರಿಂದ 300ರಷ್ಟು ದಂಡ ಹಾಕಿ ಬಿಟ್ಟು ಕಳಿಸುತ್ತಾರೆ. 10 ಲಕ್ಷಕ್ಕಿಂತ ಹೆಚ್ಚಿನ ಹಣ ಅಕ್ರಮವಾಗಿ ವರ್ಗಾವಣೆಯಾಗಿದ್ದರೆ ಅಂಥಾ ಪ್ರಕರಣಗಳನ್ನ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆ ಮಾಡಬೇಕು. ಸ್ಟಾರ್ ನಟರ ಐಟಿ ದಾಳಿ ವೇಳೆ 109 ಕೋಟಿ ಅಘೋಷಿತ ಆಸ್ತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನ ಇಡಿಗೆ ವರ್ಗಾಯಿಸಲು ಐಟಿ ಅಧಿಕಾರಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. ಒಮ್ಮೆ ಇಡಿ ಎಂಟ್ರಿಯಾದರೆ ನಟರು ಮತ್ತು ನಿರ್ಮಾಪಕರಿಗೆ ಸಂಕಷ್ಟ ಗ್ಯಾರಂಟಿಯಾಗಿದ್ದು, ವಿದೇಶಿ ವ್ಯವಹಾರ ಮತ್ತು ಮನಿ ಲಾಂಡ್ರಿಗ್ ಅಡಿ ಪ್ರಕರಣ ಕೈಗೆತ್ತಿಕೊಳ್ಳವ ಇಡಿ ಅಧಿಕಾರಿಗಳು ಎಫ್‍ಐಆರ್ ದಾಖಲು ಮಾಡಿಕೊಳ್ಳುತ್ತಾರೆ. ನಂತರ ಪ್ರತಿಯೊಬ್ಬರ ವಿಚಾರಣೆ ಮಾಡುತ್ತಾರೆ. ಹೀಗಾಗಿ ಐಟಿ ಮತ್ತು ಇಡಿ ಬಾಗಿಲುಗಳಿಗೆ ಪ್ರತಿ ದಿನ ಅಲೆಯಬೇಕಾದ ಪರಿಸ್ಥಿತಿ ನಟರು ಮತ್ತು ನಿರ್ಮಾಪಕರಿಗೆ ಬಂದೊದಗಿದೆ. ಅಗತ್ಯ ಬಿದ್ದರೆ ಅರೆಸ್ಟ್ ಮಾಡುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದೆ.
ಸ್ಟಾರ್ ನಟರ ಆದಾಯ ಮತ್ತು ತೆರಿಗೆ ನಡುವಿನ ವ್ಯತ್ಯಾಸವನ್ನ ಐಟಿ ಅಧಿಕಾರಿಗಳು ಬಯಲು ಮಾಡಿದ್ದಾರೆ. ಈಗ ಮುಂದೆ ತನಿಖೆ ಯಾವ ರೀತಿ ಸವಾಲೊಡ್ಡುತ್ತದೆ ಅನ್ನೋದು ಸ್ವಲ್ಪ ದಿನಗಳಲ್ಲೇ ಗೊತ್ತಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv