ಬೆಂಗಳೂರು: ಡಾಲಿ ಖ್ಯಾತಿಯ ಧನಂಜಯ್ ಮತ್ತೊಮ್ಮೆ ಟಾಲಿವುಡ್‍ಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಎನ್ನಲಾಗಿದ್ದು, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಇನ್ನೊಂದು ಅಚ್ಚರಿಯ ಪಾತ್ರವೆಂದರೆ ತಮಿಳಿನ ವಿಜಯ್ ಸೇತುಪತಿಯವರ ಜಾಗಕ್ಕೆ ಡಾಲಿ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಈ ಹಿಂದೆ ಕನ್ನಡದ ಭೈರವಗೀತ ಚಿತ್ರದಲ್ಲಿ ಧನಂಜಯ್ ಅಭಿನಯಿಸಿದ್ದರು, ಅದು ತೆಲುಗಿಗೂ ಡಬ್ ಆಗಿತ್ತು. ಇದೀಗ ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
Advertisement
ಟಾಲಿವುಡ್‍ನ ಬಹುನಿರೀಕ್ಷಿತ ಪುಷ್ಪ ಸಿನಿಮಾದಲ್ಲಿ ವಿಲನ್ ಆಗಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಈ ಮೂಲಕ ಅಲ್ಲು ಅರ್ಜುನ್ ವಿರುದ್ಧ ತೊಡೆ ತಟ್ಟಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬರುತ್ತಿರುವ ಮಾಹಿತಿ ಪ್ರಕಾರ ಪುಷ್ಪ ಸಿನಿಮಾದಿಂದ ವಿಜಯ್ ಸೇತುಪತಿ ಹೊರ ನಡೆದಿದ್ದಾರಂತೆ. ಇದಕ್ಕೆ ಸೂಕ್ತ ಕಾರಣವನ್ನೂ ಸೇತುಪತಿ ನೀಡಿದ್ದಾರಂತೆ. ಸಿನಿಮಾ ಬಹುಭಾಷೆಯಲ್ಲಿ ತಯಾರಾಗುತ್ತಿರುವುದೇ ವಿಜಯ್ ಸೇತುಪತಿ ಸಿನಿಮಾದಿಂದ ಹೊರ ಬರಲು ಕಾರಣ ಎನ್ನಲಾಗಿದೆ. ಹೌದು ಚಿತ್ರ ತೆಲುಗಿನಲ್ಲಿ ಮಾತ್ರ ರಿಲೀಸ್ ಆಗಲಿದೆ ಎಂದು ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ.
Advertisement
Advertisement
ವಿಜಯ್ ಒಪ್ಪಿಕೊಂಡ ನಂತರ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಆಗುತ್ತಿದೆ ಎಂದು ತಿಳಿದಿದೆ. ಹೀಗಾಗಿ ಸಿನಿಮಾದಿಂದ ಹೊರನಡೆದಿದ್ದಾರಂತೆ. ವಿಜಯ್‍ಗೆ ತಮಿಳಿನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲು ಇಷ್ಟವಿಲ್ಲವಂತೆ. ಇದರಿಂದಾಗಿ ಅವರ ತಮಿಳು ಅಭಿಮಾನಿಗಳಿಗಾಗಿ ಬೇಸರವಾಗುತ್ತಂತೆ. ಹೀಗಾಗಿ ವಿಜಯ್ ಪುಷ್ಪ ಸಿನಿಮಾದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ವಿಜಯ್ ಸದ್ಯ ತಮಿಳಿನ ಮಾಸ್ಟರ್ ಸಿನಿಮಾ ರಿಲೀಸ್‍ಗೆ ಎದುರು ನೋಡುತ್ತಿದ್ದು, ಮತ್ತೊಂದೆಡೆ ತಮಿಳು, ತೆಲುಗು ಹಾಗೂ ಹಿಂದಿ ಸೇರಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಜಯ್ ಸೇತುಪತಿ ಬ್ಯುಸಿಯಾಗಿದ್ದಾರಂತೆ. ಹೀಗಾಗಿ ಡೇಟ್ ಹೊಂದಾಣಿಕೆಯಾಗುತ್ತಿಲ್ಲವಂತೆ. ಇದಕ್ಕಾಗಿ ಪುಷ್ಪ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಆದರೆ ಈ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ.
ವಿಜಯ್ ಸೇತುಪತಿ ಚಿತ್ರದಿಂದ ಹೊರನಡೆದಿದ್ದರಿಂದ ಆ ಜಾಗಕ್ಕೆ ಕನ್ನಡದ ಡಾಲಿ ಧನಂಜಯ್ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಡಾಲಿಗೆ ಈಗಾಗಲೇ ಚಿತ್ರ ತಂಡದಿಂದ ಆಫರ್ ಬಂದಿದ್ದು, ಲಾಕ್‍ಡೌನ್ ಮುಗಿದ ಬಳಿಕ ಸಿನಿಮಾಗೆ ಸಹಿ ಹಾಕಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ವಿಜಯ್ ಸೇತುಪತಿ ಪಾತ್ರವನ್ನೇ ನಿರ್ವಹಿಸುತ್ತಾರಾ, ಬೇರೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಖಚಿತವಾಗಿಲ್ಲ. ಡಾಲಿ ಸಹ ಪುಷ್ಪ ತಂಡ ಸೇರಿದರೆ ಕನ್ನಡದ ಮೂವರು ನಟಿಸಿದಂತಾಗುತ್ತದೆ. ಈಗಾಗಲೇ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದು, ಕರಾವಳಿಯ ಸುನೀಲ್ ಶೆಟ್ಟಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಟ್ಟಿಗೆ ಧನಂಜಯ್ ಸೇರಿದರೆ ಒಟ್ಟು ಮೂವರು ಕನ್ನಡಿಗರು ಚಿತ್ರ ತಂಡ ಸೇರಿದಂತಾಗುತ್ತದೆ.