– ಗುರುವಾರ ಕೂಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರೋ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಮಳೆ ಮುಂದುವರಿದರೆ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಸಾಧ್ಯತೆಯಿದೆ.
ಜಿಲ್ಲೆಯಲ್ಲಿ ಮಳೆ ಅರ್ಭಟ ಜೋರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಅವರು ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಗುರುವಾರ ಕೂಡ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಮಳೆಗೆ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಕುಸಿಯುವ ಸಾಧ್ಯತೆಯಿದೆ. ರಸ್ತೆಯ ಒಳಭಾಗದಿಂದ ಜಲ ಬರುತ್ತಿರುವ ಹಿನ್ನೆಲೆ ರಸ್ತೆ ಬದಿ ಜೋಡಿಸಿದ್ದ ಮರಳಿನ ಚೀಲಗಳು ಕೊಚ್ಚಿಹೋಗಿವೆ. ಆಧುನಿಕ ತಂತ್ರಜ್ಞಾನ ಬಳಸಿ ಕಾಮಗಾರಿ ನಡೆಸಿದ್ದರೂ ಮರಳಿನ ಚೀಲಗಳು ಕುಸಿದಿದೆ. ಸದ್ಯ ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಪೋಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದು, ರಾಷ್ಟ್ರೀಯ ಹೆದ್ದಾರಿ 275ಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡುವ ಚಿಂತನೆ ನಡೆಸುತ್ತಿದ್ದಾರೆ.
Advertisement
Advertisement
ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಭಾಗಮಂಡಲದ ಸಂಗಮ ಕ್ಷೇತ್ರ ಜಲಾವೃತವಾಗಿದ್ದರೆ, ಇತ್ತ ವಿರಾಜಪೇಟೆ ತಾಲೂಕಿನ ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿಯೂ ತುಂಬಿ ಹರಿಯತೊಡಗಿದೆ. ದಕ್ಷಿಣ ಕೊಡಗಿನ ಕೆಲವೆಡೆ ಮಳೆಯ ರಭಸ ಹೆಚ್ಚಾದ ಪರಿಣಾಮ ಒಂದಷ್ಟು ಅನಾಹುತಗಳು ಸಂಭವಿಸಿವೆ. ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ವಿರಾಜಪೇಟೆ-ಮಾಕುಟ್ಟ ರಸ್ತೆಯ ಒಂದು ಭಾಗ ಕುಸಿದಿದ್ದು, ರಸ್ತೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ.
Advertisement
Advertisement
ಮಡಿಕೇರಿಯಲ್ಲಿಯೂ ಗಾಳಿ ಸಮೇತ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಬಾರಿ ಪ್ರಾಕೃತಿಕ ವಿಕೋಪ ನಡೆದ ಸ್ಥಳವಾದ ಮದೆನಾಡು ಬಳಿ ನೀರಿನ ಹರಿವು ಹೆಚ್ಚಾಗಿ ಆಂತಕದ ವಾತಾವರಣ ಸೃಷ್ಟಿಯಾಗಿದೆ. ಇತ್ತ ಕಾಲೂರು ಗ್ರಾಮದಲ್ಲಿ ಸಣ್ಣ ಪುಟ್ಟದಾಗಿ ಗುಡ್ಡಗಳು ಕುಸಿಯುತ್ತಿದ್ದು, ಗ್ರಾಮಸ್ಥರಿಗೆ ಆತಂಕ ಎದುರಾಗಿದೆ.
ಕಾವೇರಿ ನದಿಯ ಉಕ್ಕಿ ಹರಿಯುತ್ತಿರುವ ಕಾರಣಕ್ಕೆ ಕೆಲ ಗ್ರಾಮಗಳು ಜಲಾವೃತಗೊಂಡಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿರವ ಹಿನ್ನೆಲೆ ನದಿಪಾತ್ರದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ಕಾವೇರಿ ನದಿಯ ಪ್ರವಾಹ ಹೆಚ್ಚಾಗಿದೆ. ಅಲ್ಲದೇ ದಕ್ಷಿಣ ಕೊಡಗಿನ ಲಕ್ಮಣ ತೀರ್ಥ ನದಿಯು ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಗ್ರಾಮದ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಗಾದ್ದೆಗಳು ಜಲಾವೃತಗೊಂಡಿದೆ.
ಇತ್ತ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಸಮೀಪದ ಬೆಟ್ಟದ ಕಾಡು ಗ್ರಾಮದಲ್ಲಿ 8 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗೋ ಹಂತಕ್ಕೆ ತಲುಪಿವೆ. ಹೀಗಾಗಿ ಕೊಡಗು ಜಿಲ್ಲಾಡಳಿತ 8 ಕುಟುಂಬಗಳ ಸ್ಥಳಾಂತರಕ್ಕೆ ಮುಂದಾಗಿದೆ. ಈಗಾಗಲೇ ಸಂಕಷ್ಟಕ್ಕೆ ಸಿಲುಕಿರೋ ಜನರು ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿದ್ದು ನಾವು ಎಲ್ಲಿಯೂ ಹೋಗಲ್ಲ ನಮಗೆ ಶಾಶ್ಚತ ಪರಿಹಾರ ಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎಡಿಸಿ ತಹಶಿಲ್ದಾರ್ ಭೇಟಿ ನೀಡಿ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ.