ಬೆಂಗಳೂರು: ಕೊಡಗನ್ನು ಸಂಪರ್ಕಿಸುವ ಸಂಪಾಜೆ ಘಾಟಿ ರಸ್ತೆ ಬಂದ್ ಆದ ಪರಿಣಾಮ ಪ್ರತಿನಿತ್ಯ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಿಗಳು ಮುಂದೆ ಮಡಿಕೇರಿ ಹೋಗುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದು, ಸರ್ಕಾರ ಮನಸ್ಸು ಮಾಡಿದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದು.
ಕೊಡಗು- ದಕ್ಷಿಣ ಕನ್ನಡದ ಗಡಿಭಾಗದಲ್ಲಿ ಸುರಿದ ಭಾರೀ ಮಳೆಗೆ ಸಂಪಾಜೆ ಘಾಟಿ ರಸ್ತೆ ಕೊಚ್ಚಿ ಹೋಗಿದ್ದು ಅಲ್ಲಲ್ಲಿ ಗುಡ್ಡಗಳು ಜರಿದು ಬಿದ್ದ ಕಾರಣ ಬಂಟ್ವಾಳ – ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಬಂದ್ ಆಗಿದೆ. ಕೊಡಗಿನ ಗ್ರಾಮಗಳಾದ ಸಂಪಾಜೆ, ಚೆಂಬು, ಪೆರಾಜೆ ಗ್ರಾಮದವರಿಗೆ ವಾಣಿಜ್ಯ ವ್ಯವಹಾರಕ್ಕೆ ಸುಳ್ಯವೇ ಹತ್ತಿರವಾಗಿದ್ದರೂ ಉಳಿದ ಪ್ರತೀ ಕೆಲಸಕ್ಕೂ ತಾಲೂಕು ಮತ್ತು ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ತೆರಳಬೇಕು. ಸಂಪಾಜೆಯಿಂದ ಮುಕ್ಕಾಲು ಗಂಟೆಯಲ್ಲಿ ತಲುಪಬಹುದಾಗಿದ್ದ ಈ ಸ್ಥಳಕ್ಕೆ ಈಗ ಮಾರ್ಗವೇ ಇಲ್ಲದೇ ಜನ ಕಂಗಾಲಾಗಿದ್ದಾರೆ.
Advertisement
Advertisement
Advertisement
ಸುಳ್ಯ, ಪುತ್ತೂರು ತಾಲೂಕಿನ ಹಲವು ಮಂದಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಶಿರಾಡಿ ಘಾಟಿಯಲ್ಲಿ ಸಂಪರ್ಕ ಬಂದ್ ಆದ ಹಿನ್ನೆಲೆಯಲ್ಲಿ ಸಂಪಾಜೆ ಘಾಟಿ ಮೂಲಕವೇ ಮಡಿಕೇರಿ ತಲುಪಿ ಬೆಂಗಳೂರಿಗೆ ಬರುತ್ತಿದ್ದರು. ಆದರೆ ಈಗ ಎರಡು ಘಾಟಿ ರಸ್ತೆಗಳು ಬಂದ್ ಆದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯ ಮೂಲಕವೇ ಬೆಂಗಳೂರು ತಲುಪಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ.
Advertisement
ಘಾಟಿ ರಸ್ತೆಗಳು ಬಂದ್ ಆಗಿದ್ದರೂ ಮುಂದೆ ಈ ರೀತಿ ಸಂಪರ್ಕ ಸಮಸ್ಯೆ ಆಗದೇ ಇರಲು ನಾವು ಈಗಲೇ ಪರಿಹಾರವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಸುಳ್ಯ ಕಡೆಯಿಂದ ಕೊಡಗನ್ನು ಸಂಪರ್ಕಿಸಲು ಕಚ್ಚಾ ರಸ್ತೆಗಳಿದೆ. ಈ ರಸ್ತೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಿದರೆ ಕರಾವಳಿ ಭಾಗದ ಜನರು ಕೊಡಗನ್ನು ಸಂಪರ್ಕಿಸಲು ಸಹಾಯವಾಗುತ್ತದೆ.
ಯಾವೆಲ್ಲ ರಸ್ತೆಗಳಿವೆ?
ಮಾರ್ಗ 1: ಕಲ್ಲುಗುಂಡಿ – ಬಾಲಂಬಿ- ದಬ್ಬಡ್ಕ- ಚೆಟ್ಟಿಮಾನಿ- ಮಡಿಕೇರಿ ರಸ್ತೆ
ಈ ರಸ್ತೆಯ ಮೂಲಕ ಸುಳ್ಯದಿಂದ ಮಡಿಕೇರಿಗೆ ಇರುವ ದೂರ ಕೇವಲ 72 ಕಿಲೋ ಮೀಟರ್. ಕಲ್ಲುಗುಂಡಿಯಿದ್ದ ದಬ್ಬಡ್ಕದವರೆಗೆ ಡಾಂಬರ್ ಹಾಕಲಾಗಿದ್ದು, ಕಾಂತಬೈಲು ಸಮೀಪ ಎರಡು ಕಡೆ ಸಣ್ಣ ಸೇತುವೆಗಳು ನಿರ್ಮಾಣವಾದರೆ ಸುಲಭವಾಗಿ ಚೆಟ್ಟಿಮಾನಿ ತಲುಪಬಹುದು. ಬೇಸಿಗೆ ಸಮಯದಲ್ಲಿ ಈ ರಸ್ತೆಯಲ್ಲಿ ದಬ್ಬಡ್ಕದವರೆಗೂ ಬಸ್ ಸಂಚಾರವಿದೆ. ಲೋಕೋಪಯೋಗಿ ಅಧಿಕಾರಿಗಳು ಮನಸ್ಸು ಮಾಡಿದರೆ ಸುಳ್ಯದಿಂದ ಮಡಿಕೇರಿಗೆ ಒಂದುವರೆ ಗಂಟೆಯಲ್ಲಿ ತಲುಪಬಹುದಾಗಿದೆ.
ಮಾರ್ಗ 2: ಅರಂತೋಡು-ಮರ್ಕಂಜ- ಎಲಿಮಲೆ- ಸುಬ್ರಹ್ಮಣ್ಯ- ಕಡಮಕಲ್- ಗಾಳಿಬೀಡು- ಮಡಿಕೇರಿ ರಸ್ತೆ
ಅರಂತೋಡಿನಿಂದ ಕುಕ್ಕೆಸುಬ್ರಹ್ಮಣ್ಯದವರೆಗೆ ಯಾವುದೇ ಸಮಸ್ಯೆ ಇಲ್ಲ. ಸುಬ್ರಹ್ಮಣ್ಯದಿಂದ ಕಡಮಕಲ್ ಮತ್ತು ಗಾಳಿಬೀಡು ನಡುವೆ ಅರಣ್ಯ ಇಲಾಖೆ ಅಳವಡಿಸಿರುವ ಗೇಟ್ ತೆರವುಗೊಳಿಸಿ ಇರುವ ರಸ್ತೆಯನ್ನು ಕೊಂಚ ಅಗಲೀಕರಣ ಮಾಡಿದರೆ ಸುಬ್ರಹ್ಮಣ್ಯದಿಂದ ಮಡಿಕೇರಿಗೆ ಇರುವ 38 ಕಿ.ಮೀ ದೂರವನ್ನು ಮುಕ್ಕಾಲು ಗಂಟೆಯಲ್ಲಿ ಕ್ರಮಿಸಬಹುದು.
ಮಾರ್ಗ 3: ಸುಳ್ಯ- ಆಲೆಟ್ಟಿ- ಪಾಣತ್ತೂರು- ಕರಿಕೆ- ಭಾಗಮಂಡಲ- ಮಡಿಕೇರಿ ರಸ್ತೆ
ಸದ್ಯಕ್ಕೆ ಸುಳ್ಯ ಮತ್ತು ಕೊಡಗನ್ನು ಸಂಪರ್ಕಿಸಲು ಇರುವ ಏಕೈಕ ಮಾರ್ಗ. ಆಲೆಟ್ಟಿ ಪಾಣತ್ತೂರು ರಸ್ತೆಯ ಮೂಲಕ ಮಡಿಕೇರಿಗೆ ಪ್ರಯಾಣಿಸಬೇಕಾದರೆ ನೂರೈವತ್ತು ಕಿಲೋ ಮೀಟರ್ ಗಳಿಗೂ ಹೆಚ್ಚು ದೂರ ಪ್ರಯಾಣ ಮಾಡಬೇಕಾಗುತ್ತದೆ. ಲಘು ವಾಹನಗಳು ಮಾತ್ರ ಓಡಬಹುದಾಗಿರುವ ಈ ರಸ್ತೆಯಲ್ಲಿ ಘನ ವಾಹನಗಳ ಓಡಾಟ ಕಷ್ಟ.
ಆಗುತ್ತಾ ರಸ್ತೆ?
ಸದ್ಯಕ್ಕೆ ಚಾರ್ಮಾಡಿ ಘಾಟಿಯೊಂದೇ ಕರಾವಳಿಯಿಂದ ಬೆಂಗಳೂರಿಗೆ ತೆರಳುವ ಸುಲಭದ ಮಾರ್ಗವಾಗಿದೆ. ಒಂದು ವೇಳೆ ಗುಡ್ಡ ಜರಿದರೆ ಅಥವಾ ವಾಹನಗಳು ಪಲ್ಟಿಯಾದರೆ ರಸ್ತೆ ಸಂಪರ್ಕ ಕಡಿದುಕೊಳ್ಳುತ್ತದೆ. ಈಗಾಗಲೇ ವಾಹನಗಳು ಸಂಚರಿಸಲು ಹರಸಾಹಸ ಪಡುತಿದ್ದು, ಈ ರಸ್ತೆಯೂ ಬಂದ್ ಆದರೆ ಜನರ ಬದುಕು ದುಸ್ತರವಾಗಲಿದೆ. ಹೀಗಾಗಿ ಸರ್ಕಾರ ಪರ್ಯಾಯ ಮಾರ್ಗವನ್ನು ಅಭಿವೃದ್ಧಿ ಪಡಿಸಿದರೆ ಮುಂದೆ ಅಗಲಿರುವ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದಂತೆ ಆಗುತ್ತದೆ. ಅನಿವಾರ್ಯತೆ ಇರುವ ಕಾರಣ ಜನ ಪ್ರತಿನಿಧಿಗಳು ಮನಸ್ಸು ಮಾಡಿ ಈ ರಸ್ತೆ ನಿರ್ಮಾಣವಾಗಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv