ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಎರಡನೇ ಬಾರಿ ತಾಯಿಯಾಗಿದ್ದು, ಇಂದು ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇಂದು ಬೆಳಗ್ಗೆ ಮುಂಬೈನ ಬೀಮ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಸಮೀರಾ ಜನ್ಮ ನೀಡಿದ್ದಾರೆ. ಈ ಬಗ್ಗೆ ಸ್ವತಃ ಸಮೀರಾ ತನ್ನ ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಾಕುವ ಮೂಲಕ ಅಭಿಮಾನಿಗಳ ಜೊತೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಹಾಕಿ ಅದಕ್ಕೆ, “ನಮ್ಮ ಮನೆಗೆ ಬೆಳಗ್ಗೆ ಏಂಜೆಲ್ ಆಗಮಿಸಿದ್ದಾಳೆ . ನನ್ನ ಹೆಣ್ಣು ಮಗು. ನಿಮ್ಮ ಪ್ರೀತಿ ಹಾಗೂ ಆಶೀರ್ವಾದಕ್ಕೆ ಧನ್ಯವಾದಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಅಂದರೆ 9ನೇ ತಿಂಗಳಿನಲ್ಲಿ ಸಮೀರಾ ಬಿಕಿನಿ ಧರಿಸಿ ಅಂಡರ್ ವಾಟರ್ ಫೋಟೋಶೂಟ್ ಮಾಡಿಸಿದ್ದರು. ಅಲ್ಲದೆ ಆ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಕೆಲವರು ಈ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಸಮೀರಾರನ್ನು ಟ್ರೋಲ್ ಮಾಡಿದ್ದಾರೆ.
ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಓರ್ವ ಪುತ್ರನಿದ್ದಾನೆ. ಸಮೀರಾ ರೆಡ್ಡಿ ಬಹುಭಾಷಾ ನಟಿಯಾಗಿದ್ದು, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಜೊತೆ ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲೂ ಕಿಚ್ಚ ಸುದೀಪ್ ಅವರ ಜೊತೆ `ವರದನಾಯಕ’ ಚಿತ್ರದಲ್ಲಿ ನಟಿಸಿದ್ದಾರೆ. ಸಮೀರಾ 2014ರಲ್ಲಿ ಮದುವೆ ಆದ ಬಳಿಕ ಚಿತ್ರರಂಗದಿಂದ ದೂರವಿದ್ದಾರೆ.