ಬೆಂಗಳೂರು: ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ರಸ್ತೆ ಅಪಘಾತದಲ್ಲಿ ಗುರುವಾರ ಕೊನೆಯುಸಿರೆಳೆದಿದ್ದು, ಇಂದು ತಂದೆ ರೂಪೇಶ್ ಕಿಮ್ಸ್ ಆಸ್ಪತ್ರೆಯ ಬಳಿ ಗೋಗರೆದಿದ್ದಾರೆ. ಸಮನ್ವಿಯ ಮೃತ ದೇಹವನ್ನು ಬಾಚಿ ತಬ್ಬಿ ಐ ಆಮ್ ವೆರಿ ಸಾರಿ, ನಿನ್ನನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ ಎಂದು ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಈಚೆ ಮಗಳನ್ನು ಕಳೆದುಕೊಂಡಿರುವ ದುಃಖದಲ್ಲಿ ತಾಯಿ ಅಮೃತಾ ನಾಯ್ಡು ನಿತ್ರಾಣ ಸ್ಥಿತಿಗೆ ಜಾರಿದ್ದಾರೆ. ಬಿಗ್ ಬಾಸ್ ಹಾಗೂ ಕೆಲ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಋಷಿಕುಮಾರ್ ಅಲಿಯಾಸ್ ಕಾಳಿ ಸ್ವಾಮಿ ಸಮನ್ವಿ ಅಂತಿಮ ದರ್ಶನ ಪಡೆಯಲು ಬಂದಿದ್ದು, ಅಮೃತಾಗೆ ಸಾಂತ್ವಾನ ಹೇಳಿದ್ದಾರೆ. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು
ಮಗು ಚೂಟಿಯಾಗಿತ್ತು:
ನಾವು ಮಗುವನ್ನು ಟಿವಿಯಲ್ಲಿ ನೋಡುತ್ತಿದ್ದೆವು. ತುಂಬಾ ಇಷ್ಟ ಪಡುತ್ತಿದ್ದೆವು. ಮಗು ಚೂಟಿಯಾಗಿತ್ತು. ಶೋ ಅಲ್ಲಿ ಕೂಡ ಚೂಟಿ ಆಗಿದ್ಲು. ಆದರೆ ಯಾಕೆ ಹೀಗಾಯ್ತು! ನಾವು ಟಿವಿಯಲ್ಲಿ ನೋಡುತ್ತಿದ್ದ ಮಗು ಇನ್ಮೇಲೆ ಇಲ್ಲ ಅನ್ನೋ ನೋವನ್ನು ತಡೆದುಕೊಳ್ಳೋಕೆ ಆಗುತ್ತಿಲ್ಲ ಎಂದು ಸಮನ್ವಿ ಅಂತಿಮ ದರ್ಶನಕ್ಕೆ ಬಂದಿದ್ದ ಅಭಿಮಾನಿ ಲಕ್ಷ್ಮಮ್ಮ ಹೇಳಿಕೆ ನೀಡಿದರು. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು
ಸಮನ್ವಿ ಅಂತಿಮ ದರ್ಶನಕ್ಕೆ ಲಿಬರ್ಟಿ ಅಪಾರ್ಟ್ಮೆಂಟ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಪಾರ್ಟ್ಮೆಂಟ್‌ನಲ್ಲಿ 20 ಮಂದಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಪಾರ್ಟ್ಮೆಂಟ್‌ನ ಪ್ರವೇಶದ್ವಾರದಲ್ಲಿ ಮಧ್ಯಾಹ್ನ 1 ಗಂಟೆಯ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆಯಿದ್ದು, ಸಂಬಂಧಿಕರು ಹಾಗೂ ಸಿನಿಮಾ – ಸೀರಿಯಲ್ ಕಲಾವಿದರು ಅಂತಿಮ ದರ್ಶನ ಪಡೆಯಲಿದ್ದಾರೆ. ಮಧ್ಯಾಹ್ನದ ಬಳಿಕ ಸಮನ್ವಿ ಅಂತ್ಯ ಸಂಸ್ಕಾರ ನಡೆಯಲಿದೆ. ಇದನ್ನೂ ಓದಿ: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ