ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಈ ಬಾರಿ ತಮ್ಮ ಮನೆಯಲ್ಲಿ ಗಣೇಶ ಚತುರ್ಥಿಯನ್ನು ಆಚರಿಸುತ್ತಿಲ್ಲ. ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿರೋ ಸಲ್ಲು ತಮ್ಮ ಸಹೋದರಿ ಅರ್ಪಿತಾ ಖಾನ್ ಶರ್ಮಾ ಮನೆಯಲ್ಲಿ ಗಣೇಶ ಹಬ್ಬವನ್ನು ಆಚರಿಸಲಿದ್ದಾರೆ.
ಸಲ್ಮಾನ್ ಖಾನ್ ಕಳೆದ 15 ವರ್ಷಗಳಿಂದ ಗಣೇಶ ಚತುರ್ಥಿಯ ದಿನ ತಮ್ಮ ಬಾಂದ್ರಾ ನಿವಾಸದಲ್ಲಿ ಗಣೇಶ್ ಮೂರ್ತಿಯನ್ನು ಇರಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಅವರ ಮನೆಯಲ್ಲಿ ಗಣೇಶ ಹಬ್ಬ ಆಚರಣೆ ಪ್ರಾರಂಭವಾಗಿದ್ದೇ ಅರ್ಪಿತಾ ಅವರಿಂದ. ಹೀಗಾಗಿ ಈ ಬಾರಿ ಅರ್ಪಿತಾ ಮನೆಯಲ್ಲಿಯೇ ಹಬ್ಬ ಆಚರಿಸಲಿದ್ದಾರೆ.
ಸದ್ಯ `ಟೈಗರ್ ಜಿಂದಾ ಹೈ’ ಸಿನಿಮಾದ ಚಿತ್ರೀಕರಣಕ್ಕಾಗಿ ಅಬುಧಾಬಿಯಲ್ಲಿರುವ ಸಲ್ಮಾನ್ ಖಾನ್ ಹಬ್ಬಕ್ಕಾಗಿ ಒಂದು ದಿನದ ಮಟ್ಟಿಗೆ ಮುಂಬೈಗೆ ಬರಲಿದ್ದಾರೆ.
ಈಗಾಗಲೇ ಸೋದರಿ ಅರ್ಪಿತಾ ತನ್ನ ಎಲ್ಲ ಸಹೋದರರಿಗೆ ಗಣೇಶ ಹಬ್ಬದ ಆಮಂತ್ರಣವನ್ನು ನೀಡಿದ್ದಾರೆ. ಆಮಂತ್ರಣ ಹಿನ್ನೆಲೆಯಲ್ಲಿ ಸಲ್ಮಾನ್ ಕೇವಲ ಒಂದು ದಿನ ಮಾತ್ರ ಸೋದರಿಯ ಮನೆಯ ಗಣೇಶ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ವರ್ಷ `ಟ್ಯೂಬ್‍ಲೈಟ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದರಿಂದ ಸಲ್ಮಾನ್ ಗಣೇಶ ಹಬ್ಬವನ್ನು ಮಿಸ್ ಮಾಡಿಕೊಂಡಿದ್ದರು.
ಏಕ್ ಥಾ ಟೈಗರ್ ಸಿನಿಮಾದ ಮುಂದುವರೆದ ಭಾಗವೇ ಟೈಗರ್ ಜಿಂದಾ ಹೈ ಚಿತ್ರವಾಗಿದೆ. ಸಿನಿಮಾದಲ್ಲಿ ಸಲ್ಮಾನ್ ಗೆ ಜೊತೆಯಾಗಿ ಕತ್ರೀನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಇದೇ ವರ್ಷ ಡಿಸೆಂಬರ್ ನಲ್ಲಿ ತೆರೆಕಾಣುವ ಸಾಧ್ಯತೆಗಳಿವೆ.